ಬಾಳ್ಕುದ್ರು ಮಠದ ಶ್ರೀನೃಸಿಂಹಾಶ್ರಮ ಸ್ವಾಮೀಜಿ ನಿಧನ

ಬ್ರಹ್ಮಾವರ, ಜು.4: ಇಲ್ಲಿಗೆ ಸಮೀಪದ ಹಂಗಾರಕಟ್ಟೆಯಲ್ಲಿರುವ ಬಾಳ್ಕುದ್ರು ಮಠದ ಶ್ರೀನೃಸಿಂಹಾಶ್ರಮ ಸ್ವಾಮೀಜಿ (55) ಇಂದು ಬೆಳಗ್ಗೆ ನಿಧನರಾದರು. ಕಿಡ್ನಿಗೆ ಸಂಬಂಧಿಸಿದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕೆಲವು ತಿಂಗಳ ಹಿಂದೆ ಶ್ರೀವಾಸುದೇವ ಸದಾಶಿವಾಶ್ರಮ ಸ್ವಾಮೀಜಿ ಅವರನ್ನು ಶಿಷ್ಯನನ್ನಾಗಿ ಸ್ವೀಕರಿಸಿದ್ದು, ಮಠದಲ್ಲೇ ವಿಶ್ರಾಂತಿಯಲ್ಲಿದ್ದರು.
ವಾರದಲ್ಲಿ ಎರಡು ಬಾರಿ ಡಯಾಲಿಸೀಸ್ ಚಿಕಿತ್ಸೆಗೆ ತೆರಳುತ್ತಿದ್ದ ಸ್ವಾಮೀಜಿ, ಇಂದು ಬೆಳಗ್ಗೆ ಚಿಕಿತ್ಸೆಗೆ ತೆರಳುವ ವೇಳೆ ಬ್ರಹ್ಮಾವರ ಸಮೀಪ ಆರೋಗ್ಯದಲ್ಲಿ ಏರುಪೇರಾಗಿದ್ದು, ಕೂಡಲೇ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ, ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದರು.
ಹಿರಿಯಶ್ರೀಗಳ ಮೃತದೇಹವನ್ನು ಬಾಳೆಕುದ್ರು ಮಠಕ್ಕೆ ತಂದು ಸಾರ್ವಜನಿಕರ ಹಾಗೂ ಭಕ್ತರ ದರ್ಶನಕ್ಕೆ ಇಡಲಾಯಿತು. ಸಂಜೆ ಬಾಳ್ಕುದ್ರು ಮಠದ ಆವರಣದಲ್ಲಿ ಕಿರಿಯ ಯತಿಗಳಾದ ಶ್ರೀವಾಸುದೇವ ಸದಾ ಶಿವಾಶ್ರಮ ಸ್ವಾಮೀಜಿಗಳ ಮೂಲಕ ಅಂತಿಮ ವಿಧಿವಿಧಾನಗಳನ್ನು ನಡೆಸಲಾಯಿತು.
ಬಾಳಕುದ್ರು ಮಠದ ಪೂರ್ವ ಸ್ವಾಮೀಜಿಗಳಾದ ಶ್ರೀಶಂಕರಾಶ್ರಮ ಸ್ವಾಮೀಜಿಗಳ ನಿಧನದ ಬಳಿಕ 2006ರಲ್ಲಿ ಶ್ರೀನೃಸಿಂಹಾಶ್ರಮ ಶ್ರೀಗಳು ಶ್ರೀಮಠದ ಪೀಠಾಧಿಪತಿಗಳಾದರು. ಶೃಂಗೇರಿ ಮಠದ ಹಿರಿಯ ಶ್ರೀಗಳ ನೇತೃತ್ವದಲ್ಲಿ ಹೆಬ್ಬೂರು ಮಠದ ಶ್ರೀನಾರಾಯಣಾಶ್ರಮ ಸ್ವಾಮೀಜಿಗಳಿಂದ ಇವರು ಸನ್ಯಾಸ ದೀಕ್ಷೆ ಸ್ವೀಕರಿಸಿದ್ದರು. ಕಳೆದ ಕೆಲವು ವರ್ಷಗಳಿಂದ ಇವರು ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತಿದ್ದರು.







