ಶರಣ್ ಪಂಪ್ವೆಲ್ ಹೇಳಿಕೆಗೆ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಖಂಡನೆ

ಅಶೋಕ್ ಕುಮಾರ್ ಕೊಡವೂರು
ಉಡುಪಿ, ಜು.4: ಬ್ರಹ್ಮಾವರದ ಕುಂಜಾಲಿನಲ್ಲಿ ದೊರೆತ ದನದ ರುಂಡ ಪ್ರಕರಣಕ್ಕೆ ಇಸ್ಲಾಮಿಕ್ ಗೋಮಾಂಸ ಮಾಫಿಯಾದ ಸಂಬಂಧ ಕಲ್ಪಿಸಿ ವಿಶ್ವಹಿಂದೂ ಪರಿಷತ್ ನಾಯಕ ಶರಣ್ ಪಂಪ್ವೆಲ್ ಜನರ ದಿಕ್ಕು ತಪ್ಪಿಸುವ ಕಪೋಲಕಲ್ಪಿತ ಹೇಳಿಕೆ ನೀಡಿರುವುದು ಖಂಡನೀಯ. ಇದರ ಹಿಂದೆ ಜಿಲ್ಲೆಯ ಕೋಮು ಸೌಹಾರ್ದತೆಯನ್ನು ಕೆಡಿಸುವ ಷಡ್ಯಂತ್ರ ಅಡಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಹೇಳಿದ್ದಾರೆ.
ತನ್ನದೇ ಊರಿನಲ್ಲಿ ತನ್ನದೇ ಪಕ್ಷದ ನಾಯಕನ ಮಗನೊಬ್ಬ ಪ್ರೀತಿ ಪ್ರಣಯದ ನಾಟಕವಾಡಿ ಮುಗ್ದ ಹಿಂದೂ ಹೆಣ್ಣು ಮಗಳೊಬ್ಬಳ ಬದುಕಿಗೆ ದ್ರೋಹ ಬಗೆದಾಗ ಅವಳಿಗೆ ನ್ಯಾಯ ಒದಗಿಸದೆ ಅಪರಾಧಿ ಯನ್ನೇ ರಕ್ಷಿಸಲು ನೋಡುತ್ತಿರುವ ಶರಣ್ ಪಂಪ್ವೆಲ್ ಒಬ್ಬ ಡೋಂಗಿ ಹಿಂದುತ್ವವಾದಿ. ದ.ಕ ಜಿಲ್ಲೆಯ ಕೋಮು ಸೌಹಾದರ್ಕ್ಕೆ ವಿಷಹಾಕಿ, ಜನರ ನೆಮ್ಮದಿ ಕೆಡಿಸಿರುವ ಈ ವ್ಯಕ್ತಿ ಅಲ್ಲೀಗ ಪೊಲೀಸರ ನಿರ್ಭಿಡೆಯ ಕಟ್ಟುನಿಟ್ಟಿನ ಕಾನೂನು ಕ್ರಮಕ್ಕೆ ಹೆದರಿ ಉಡುಪಿಗೆ ಓಡಿ ಬಂದು ಧರ್ಮ ಸಂಯಮತೆಯ ಕ್ಷೇತ್ರವಾದ ಈ ಜಿಲ್ಲೆಯನ್ನು ತನ್ನ ಕೋಮು ವಿದ್ವಂಸಕತೆಯ ಗುಪ್ತ ಕಾರ್ಯಸೂಚಿಗೆ ಬಳಸಿಕೊಳ್ಳಲು ಹುನ್ನಾರ ನಡೆಸುತ್ತಿ ರುವುದು ಖಂಡನೀಯ. ಉಡುಪಿಯ ಶಾಂತಿಪ್ರಿಯ ಜನ ಇದಕ್ಕೆ ಕಿವಿಕೊಡಬಾರದು ಎಂದು ಕೊಡವೂರು ಪತ್ರಿಕಾ ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.
ಶರಣ್ ಪಂಪ್ವೆಲ್ ನೀಡಿದ ಹೇಳಿಕೆಯನ್ನು ಇಲ್ಲಿನ ಕೆಲವು ಮನುವಾದಿ ಚಿಂತಕರು ಹಾಗೂ ಬಿಜೆಪಿಯ ಹಿಜಾಬ್ ರಾಜಕೀಯದ ಶಾಸಕರು ಬೆಂಬಲಿಸುತ್ತಿರುವುದು ಅಮಾನವೀಯ ನಡೆಯಾಗಿದೆ. ಇಂತವರಿಂದ ಜಿಲ್ಲೆಯ ನೆಮ್ಮದಿ ಹಾಗೂ ಅಭಿವೃದ್ದಿಯನ್ನು ನಿರೀಕ್ಷಿಸಲಾಗದು ಎಂದು ಅವರು ಹೇಳಿದ್ದಾರೆ.
ಕುಂಜಾಲಿನಲ್ಲಿ ದೊರೆತ ದನದ ರುಂಡ ಪ್ರಕರಣದಲ್ಲಿ ಭಾಗಿಯಾದ ದುಷ್ಕರ್ಮಿಗಳನ್ನು ಆರಕ್ಷಕ ಇಲಾಖೆ ಶೀಘ್ರ ಕಾರ್ಯಾಚರಣೆಯ ಮೂಲಕ ಬಂಧಿಸಿ ತನಿಖೆ ಮುಂದುವರಿಸಿದೆ. ಅಪರಾಧಿಗಳು ಯಾರೇ ಇರಲಿ ಅವರಿಗೆ ಶಿಕ್ಷೆ ಆಗಲೇಬೇಕು.ಈ ನಿಟ್ಟಿನಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಸರಿಯಾದ ದಿಕ್ಕಿನಲ್ಲಿ ಮುನ್ನಡೆದಿದೆ. ಯಾವುದೇ ತಪ್ಪನ್ನು ಜಾತಿ ಧರ್ಮದ ಆಧಾರದ ಮೇಲೆ ನಿರ್ಧರಿಸಲಾಗದು. ಇದು ಆಳುವ ಸರಕಾರದ ಬದ್ಧತೆಯೂ ಆಗಿದೆ ಎಂದು ಅಶೋಕ್ಕುಮಾರ್ ಕೊಡವೂರು ಹೇಳಿಕೆಯಲ್ಲಿ ತಿಳಿಸಿದ್ದಾರೆ.







