ಉಡುಪಿ ಜಿಲ್ಲೆಯ ವಿವಿಧ ಸರಕಾರಿ ಆಸ್ಪತ್ರೆಗಳಲ್ಲಿ ದೃಷ್ಟಿ ಕೇಂದ್ರ ಉದ್ಘಾಟನೆ

ಉಡುಪಿ, ಜು.4: ಸಾರ್ವತ್ರಿಕವಾಗಿ ಕಣ್ಣಿನ ಉತ್ತಮ ಆರೋಗ್ಯಕ್ಕಾಗಿ ಹಾಗೂ ಸಮಗ್ರ ಕಣ್ಣಿನ ಆರೈಕೆಗಾಗಿ ರಾಷ್ಟ್ರೀಯ ಅಂಧತ್ವ ನಿಯಂತ್ರಣ ಕಾರ್ಯಕ್ರಮದಡಿ ರಾಜ್ಯ ಸರಕಾರ ಜಾರಿಗೆ ತಂದಿರುವ ಮಹತ್ವಾಕಾಂಕ್ಷೆ ಯೋಜನೆಯಾದ ಶಾಶ್ವತ ‘ಆಶಾಕಿರಣ ದೃಷ್ಟಿಕೇಂದ್ರ’ವನ್ನು ಗುರುವಾರ ಜಿಲ್ಲೆಯ ವಿವಿಧ ಸರಕಾರಿ ಆಸ್ಪತ್ರೆಗಳಲ್ಲಿ ಉದ್ಘಾಟಿಸಲಾಯಿತು.
ಕುಂದಾಪುರ ಹಾಗೂ ಕಾರ್ಕಳದ ತಾಲೂಕು ಸರಕಾರಿ ಆಸ್ಪತ್ರೆಗಳಲ್ಲಿ, ಬ್ರಹ್ಮಾವರ ಮತ್ತು ಶಿರ್ವಗಳ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಆಶಾಕಿರಣ- ದೃಷ್ಟಿ ಕೇಂದ್ರಗಳನ್ನು ತೆರೆಯಲಾಗಿದೆ.
ಕಣ್ಣಿನ ಸಮಸ್ಯೆ ಇರುವ ಸಾರ್ವಜನಿಕರು ಈ ಕೇಂದ್ರಗಳಲ್ಲಿ ಉಚಿತ ಚಿಕಿತ್ಸೆ ಪಡೆಯಬಹುದಾಗಿದೆ. ಅಲ್ಲದೇ ದೃಷ್ಟಿದೋಷವಿರುವವರು ಸಹ ಬಂದು ಪರೀಕ್ಷೆ ಮತ್ತು ಚಿಕಿತ್ಸೆ ಪಡೆಯಬಹುದು. ಇಲ್ಲಿ ಚಿಕಿತ್ಸೆ ಪಡೆಯುವ ಅರ್ಹ ಫಲಾನುಭವಿಗಳಿಗೆ ಕನ್ನಡಕ ವಿತರಣೆ ಹಾಗೂ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಅವಶ್ಯಕತೆಯಿದ್ದಲ್ಲಿ ಅಂತಹವರನ್ನು ಗುರುತಿಸಿ ಶಸ್ತ್ರಚಿಕಿತ್ಸೆಯನ್ನು ಸಹ ಉಚಿತವಾಗಿ ನಡೆಸಲಾಗುವುದು ಎಂದು ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ.







