ಉಡುಪಿಯಲ್ಲಿ ತಾಯಿ, ಮಕ್ಕಳ ಕಗ್ಗೊಲೆ ಪ್ರಕರಣ: ಆರೋಪಿ ಪರ ವಕೀಲರಿಗೆ ದಾಖಲೆ ಹಸ್ತಾಂತರಿಸಲು ಆದೇಶ

ಪ್ರವೀಣ್ ಚೌಗುಲೆ
ಉಡುಪಿ: ನೇಜಾರು ತಾಯಿ ಮತ್ತು ಮೂವರು ಮಕ್ಕಳ ಹತ್ಯೆ ಪ್ರಕರಣದ ಆರೋಪಿ ಪ್ರವೀಣ್ ಚೌಗುಲೆ ಪರ ಹಿಂದಿನ ವಕೀಲರು ಇದೀಗ ಕಾನೂನು ಸೇವಾ ಪ್ರಾಧಿಕಾರದಿಂದ ನಿಯೋಜಿಸಲಾದ ವಕೀಲರಿಗೆ ದಾಖಲೆ ಗಳನ್ನು ಹಸ್ತಾಂತರಿ ಸದ ಕಾರಣಕ್ಕೆ ವಿಚಾರಣೆಯನ್ನು ಜು.19ಕ್ಕೆ ಮುಂದೂಡಿ ಉಡುಪಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ನೀಡಿದೆ.
ಹಿಂದಿನ ವಿಚಾರಣೆಯ ಸಂದರ್ಭ ಆರೋಪಿ ಪರ ವಕೀಲ ದಿಲ್ರಾಜ್ ಸಿಕ್ವೇರಾ, ಪ್ರಕರಣದಿಂದ ವಕಾಲತ್ತು ವಾಪಾಸ್ಸು ಪಡೆದಿದ್ದು, ಈ ಹಿನ್ನೆಲೆಯಲ್ಲಿ ಕಾನೂನು ಸೇವಾ ಪ್ರಾಧಿಕಾರದಿಂದ ವಕೀಲ ರಾಜು ಪೂಜಾರಿ ಯನ್ನು ಉಚಿತವಾಗಿ ಆರೋಪಿ ಪರ ವಾದಿಸಲು ನಿಯೋಜಿಸಲಾಯಿತು. ಈ ಹಿಂದಿನ ವಕೀಲರ ಬಳಿ ಇರುವ ಎಲ್ಲ ದಾಖಲೆಗಳನ್ನು ಈಗಿನ ವಕೀಲರಿಗೆ ಸಲ್ಲಿಸಲು ಸೂಚಿಸಲಾಗಿತ್ತು.
ಆದರೆ ಹಿಂದಿನ ವಕೀಲರು ಕೋರ್ಟ್ ಆದೇಶ ನೀಡದ ಹಿನ್ನೆಲೆಯಲ್ಲಿ ಯಾವುದೇ ದಾಖಲೆಗಳನ್ನು ಈಗಿನ ವಕೀಲರಿಗೆ ಸಲ್ಲಿಸಿರಲಿಲ್ಲ. ಆದುದರಿಂದ ಇಂದು ನ್ಯಾಯಾಧೀಶ ಸಮಿವುಲ್ಲಾ, ಆರೋಪಿ ಪರ ವಕೀಲರಿಗೆ ಎಲ್ಲ ದಾಖಲೆ ಗಳನ್ನು ಸಲ್ಲಿಸುವಂತೆ ಆದೇಶ ಹೊರಡಿಸಿದರು. ಮುಂದಿನ ವಿಚಾರಣೆ ದಿನಾಂಕದಂದೇ ಈ ಮೂರು ಸಾಕ್ಷಿಗಳ ಪಾಟಿ ಸವಾಲು ದಿನಾಂಕವನ್ನು ನ್ಯಾಯಾಧೀಶರು ನಿಗದಿಪಡಿಸಲಿದ್ದಾರೆ ಎಂದು ತಿಳಿದುಬಂದಿದೆ.





