ಉಡುಪಿ ಎಸ್ಪಿ ಹರಿರಾಮ್ ಶಂಕರ್ ಮಸೀದಿ, ಚರ್ಚ್‌ಗಳಿಗೆ ಭೇಟಿ

ಉಡುಪಿ, ಜು.5: ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಶನಿವಾರ ಉಡುಪಿ ಜಾಮೀಯ ಮಸೀದಿ ಹಾಗೂ ಪೆರಂಪಳ್ಳಿ ಫಾತಿಮಾ ಮಾತೆ ಚರ್ಚಿಗೆ ಸೌಹಾರ್ದ ಭೇಟಿ ನೀಡಿ ಸಮಾಲೋಚನೆ ನಡೆಸಿದರು.
ಮಸೀದಿಗೆ ಸೌಹಾರ್ದ ಭೇಟಿ ನೀಡಿ ವಿಕ್ಷೀಸಿದ ಎಸ್ಪಿ, ಬಳಿಕ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಮತ್ತು ಜಾಮಿಯಾ ಮಸೀದಿಯ ಪದಾಧಿಕಾರಿಗಳು ಮತ್ತು ಮುಸ್ಲಿಂ ಮುಖಂಡರ ಜೊತೆ ಮಾತುಕತೆ ನಡೆಸಿದರು. ಜಿಲ್ಲೆಯಲ್ಲಿ ಸೌಹಾರ್ದ, ಸಾಮರಸ್ಯ ಕಾಪಾಡಲು ಮತ್ತು ಕಾನೂನಾತ್ಮಕವಾಗಿ ಎಲ್ಲಾ ರೀತಿಯ ಸಮಸ್ಯೆಗೆ ಸ್ಪಂದಿಸುವ ಬಗ್ಗೆ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಮುಹಮ್ಮದ್ ಮೌಲಾ, ಜಾಮಿಯ ಮಸೀದಿಯ ಅಧ್ಯಕ್ಷ ಮುಹಮ್ಮದ್ ರಿಯಾಝ್, ಪ್ರಮುಖರಾದ ಇಸ್ಮಾಯಿಲ್ ಕಟಪಾಡಿ, ಪೀರು ಸಾಹೇಬ್, ಶಾಹಿದ್ ಅಲಿ, ಖಾಲಿದ್, ಅಝೀಜ್ ಮೊದಲಾದವರು ಉಪಸ್ಥಿತರಿದ್ದರು.
ಚರ್ಚಿನ ಇತಿಹಾಸ, ಕ್ರೈಸ್ತ ಸಮುದಾಯದ ವಿವರ ಹಾಗೂ ಚರ್ಚ್ ಕಟ್ಟಡದ ಐತಿಹಾಸಿಕ ವಿನ್ಯಾಸದ ಕುರಿತು ಮಾಹಿತಿ ಪಡೆದ ವರಿಷ್ಠಾಧಿಕಾರಿಗಳು ಕ್ರೈಸ್ತ ಸಮುದಾಯಕ್ಕೆ ಅಗತ್ಯವಿರುವ ಎಲ್ಲಾ ಕಾನೂನಾ ತ್ಮಕ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಈ ವೇಳೆ ಚರ್ಚಿನ ಪ್ರಧಾನ ಧರ್ಮಗುರು ವಂ.ವಿಶಾಲ್ ಲೋಬೊ, ಮಣಿಪಾಲ ಠಾಣೆಯ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಉಪಸ್ಥಿತರಿದ್ದರು.