ಪ್ರತಿದಿನ ಜ್ಞಾನ ಪಡೆಯುವ ತುಡಿತ ವಕೀಲರಲ್ಲಿ ಅಗತ್ಯ: ನ್ಯಾ.ಇಂದಿರೇಶ್

ಉಡುಪಿ, ಜು.5: ಕಾನೂನುಗಳು ಬದಲಾಗುತ್ತಿರುತ್ತವೆ ಮತ್ತು ಬೇರೆ ಬೇರೆ ವ್ಯಾಖ್ಯಾನವನ್ನು ನೀಡುತ್ತಿ ರುತ್ತದೆ. ಕಾನೂನು ಪದವಿ ಪಡೆದ ಕೂಡಲೇ ವಿದ್ಯಾರ್ಥಿ ಜೀವನ ಕೊನೆಗೊಳ್ಳುವುದಿಲ್ಲ. ವಕೀಲನಾದ ಬಳಿಕ ಆತನ ನಿಜವಾದ ಕಲಿಕೆ ಆರಂಭಗೊಳ್ಳುತ್ತದೆ. ವಕೀಲರಿಗೆ ಪ್ರತಿದಿನ ಜ್ಞಾನವನ್ನು ಪಡೆಯುವ ತುಡಿತ ಇರಬೇಕು ಎಂದು ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಉಡುಪಿ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಇ.ಎಸ್.ಇಂದಿರೇಶ್ ಹೇಳಿದ್ದಾರೆ.
ಉಡುಪಿ ವಕೀಲರ ಸಂಘ ಹಾಗು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದೊಂದಿಗೆ ಸಿವಿಲ್ ಜಡ್ಜ್ ಪರೀಕ್ಷಾರ್ಥಿಗಳ ತರಬೇತಿ ಕಾರ್ಯಕ್ರಮ ಮತ್ತು ಇ-ಲೈಬ್ರರಿಯನ್ನು ಶನಿವಾರ ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ರಾಜಕೀಯ ಶಾಸ್ತ್ರ ಹಾಗು ಕಾನೂನು ವಿದ್ಯಾರ್ಥಿಗಳು ಸಂವಿಧಾನ ಕಲಿಯುತ್ತಾರೆ. ಆದರೆ ಕಾನೂನು ವಿದ್ಯಾರ್ಥಿಗಳು ಸಂವಿಧಾನ ವಿಷಯವನ್ನು ಭಿನ್ನ ರೀತಿಯಲ್ಲಿ ನೋಡುವ ಅಗತ್ಯವಿದೆ ಎಂದರು.
ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಸದಸ್ಯ ಎಸ್.ಬಸವರಾಜ್ ಮಾತನಾಡಿ, ಸರಕಾರಿ ವಕೀಲರಾಗಿ ಒಂದು ವರ್ಷ ಇದ್ದರೇ 5 ವರ್ಷ ವಕೀಲರಾಗಿದ್ದಷ್ಟು ಅನುಭವ ದೊರೆಯುತ್ತದೆ. ನ್ಯಾಯವಾದಿಗಳು ನ್ಯಾಯಧೀಶರಾದಾಗ, ವಕೀಲರ ಸಮಸ್ಯೆಗಳ ಬಗ್ಗೆಯೂ ಅರಿವಿರುತ್ತದೆ. ಅಸಾಧ್ಯವಾದದ್ದು ಯಾವುದು ಇಲ್ಲಾ. ಕಠಿಣ ಪರಿಶ್ರಮ ಮತ್ತು ದೃಢ ನಿರ್ಧಾರದಿಂದ ಸಾಧಿಸಲು ಸಾಧ್ಯವಾಗುತ್ತದೆ. ನ್ಯಾಯಧೀಶರಾಗಲು ಬಯಸುವವರ ಒಳಿತು ಕೆಡುಕನ್ನು ಅರಿತು ಪರೀಕ್ಷೆಯನ್ನು ಎದುರಿಸಿ ಎಂದರು.
ಕರ್ನಾಟಕ ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಹಾಗು ವಿಶ್ರಾಂತ ಹೈಕೋರ್ಟ್ ನ್ಯಾಯಮೂರ್ತಿಟಿ.ಜಿ.ಶಿವಶಂಕರೇಗೌಡ ಸಿವಿಲ್ ನ್ಯಾಯಧೀಶ ಆಗಲು ಬಯಸುವ ಅಭ್ಯರ್ಥಿಗಳಿಗೆ ಸಲಹೆ ಮತ್ತು ತಂತ್ರಗಳು ವಿಷಯದ ಕುರಿತು ಉಪನ್ಯಾಸ ನೀಡಿದರು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶ ಕಿರಣ್.ಎಸ್.ಗಂಗಣ್ಣನವರ್ ಶುಭ ಹಾರೈಸಿದರು.
ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಿಗೆ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಶ್ ಎಆರ್ ಮನವಿ ಪತ್ರ ಸಲ್ಲಿಸಿದರು. ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್ ಸ್ವಾಗತಿಸಿದರು. ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ಯೊಗೇಶ್ ಪಿ.ಆರ್. ವಂದಿಸಿದರು. ನ್ಯಾಯವಾದಿ ಸಹನಾ ಕುಂದರ್ ನಿರೂಪಿಸಿದರು.