ಹಿಂದಿ ಹೇರಿಕೆ ವಿರೋಧಿಸಿ ಕರವೇ ಪ್ರತಿಭಟನೆ

ಉಡುಪಿ, ಜು.5: ರಾಜ್ಯದಲ್ಲಿ ದ್ವಿಭಾಷಾ ಶಿಕ್ಷಣ ನೀತಿಯನ್ನು ಜಾರಿಗೊಳಿಸು ವಂತೆ ಆಗ್ರಹಿಸಿ ಹಾಗೂ ಹಿಂದಿ ಹೇರಿಕೆ ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡ ಬಣ) ವತಿಯಿಂದ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಲಾಯಿತು.
ಕರವೇ ಜಿಲ್ಲಾಧ್ಯಕ್ಷ ಪ್ರಭಾಕರ ಪೂಜಾರಿ ಮಾತನಾಡಿ, ರಾಜ್ಯದ ಪಠ್ಯಕ್ರಮದಲ್ಲಿ ಕನ್ನಡವನ್ನು ಪ್ರಥಮ ಭಾಷೆಯಾಗಿ, ದ್ವಿತೀಯ ಭಾಷೆಯಾಗಿ ಇಂಗ್ಲಿಷ್ ಮತ್ತು ತೃತೀಯ ಭಾಷೆಯಾಗಿ ಹಿಂದಿಯನ್ನು ಕಲಿಸಲಾ ಗುತ್ತಿದೆ. ಮಕ್ಕಳು ಮೂರನೇ ಭಾಷೆಯಾಗಿ ಹಿಂದಿ ಕಲಿಯುವುದನ್ನು ಕಡ್ಡಾಯಗೊಳಿಸಲಾಗಿದೆ. ಇದು ವಿದ್ಯಾರ್ಥಿಗಳಿಗೆ ಅನಗತ್ಯವಾದ ಒತ್ತಡ ಒಡ್ಡುತ್ತಿದೆ ಎಂದರು.
ರಾಜ್ಯದಲ್ಲಿ ಅನಗತ್ಯ ಹಿಂದಿ ಹೇರಿಕೆ ಸಲ್ಲದು. ತೃತೀಯ ಭಾಷೆಯಾದ ಹಿಂದಿಯನ್ನು ಪಠ್ಯಕ್ರಮದಿಂದ ಹೊರಗಿಡಬೇಕು. ರಾಜ್ಯ ಮತ್ತು ಕೇಂದ್ರೀಯ ಶಿಕ್ಷಣ ವ್ಯವಸ್ಥೆಗಳಾದ ಸಿಬಿಎಸ್‌ಸಿ, ಐಸಿಎಸ್‌ಇ ಶಾಲೆಗಳಿಗೆ ಏಕರೂಪದ ದ್ವಿಭಾಷಾ ನೀತಿಯನ್ನು ಜಾರಿಗೊಳಿಸಬೇಕು. ಸಿಬಿಎಸ್‌ಇ, ಐಸಿಎಸ್‌ಇ ಶಾಲೆಗಳಲ್ಲೂ ಪ್ರಥಮ ಭಾಷೆಯಾಗಿ ಕನ್ನಡವನ್ನೇ ಕಡ್ಡಾಯಗೊಳಿಸಬೇಕು. ಕನ್ನಡ ಮಾಧ್ಯಮ ಶಾಲೆಗಳನ್ನು ಬಲಪಡಿಸಿ, ಉತ್ತಮ ಗುಣಮಟ್ಟದ ಇಂಗ್ಲಿಷ್ ಶಿಕ್ಷಣವನ್ನು ನೀಡಬೇಕು ಎಂದು ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೇಮಂತ್ ಕುಮಾರ್, ಮುಖಂಡರಾದ ಜಯ ಸಾಲಿಯಾನ್, ಗೋಪಾಲ್ ಮೆಂಡನ್, ಅನಿಲ್ ಪೂಜಾರಿ, ಕಿರಣ್ ಪಿಂಟೊ, ಶಾಬೂದ್ದೀನ್, ಅಬ್ದುಲ್ ಮಜೀದ್, ಉಮೇಶ್ ಶೆಟ್ಟಿ, ಸುಧಾಕರ್ ಕಲ್ಮಾಡಿ, ಅಶ್ವಿನಿ, ಕಾವೇರಿ, ಕವಿತಾ, ಪೂರ್ಣಿಮಾ ಕೋಟ್ಯಾನ್, ರಾಘವೇಂದ್ರ ಶೆಟ್ಟಿ, ವೀರೇಶ ಕುಚ, ಶ್ರೀಕಾಂತ್ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.