ಕುಂಜಾಲು ಗೋಹತ್ಯೆ ಪ್ರಕರಣ| ಪೂರ್ವಯೋಜಿತ ಕೃತ್ಯದ ಶಂಕೆ: ಸಮಗ್ರ ತನಿಖೆಗೆ ಎಸ್‌ಡಿಪಿಐ ಆಗ್ರಹ

ಉಡುಪಿ: ಬ್ರಹ್ಮಾವರದ ಕುಂಜಾಲಿನಲ್ಲಿ ಇತ್ತೀಚೆಗೆ ನಡೆದ ಗೋಹತ್ಯೆ ಪ್ರಕರಣ ಪೂರ್ವನಿಯೋಜಿತ ಕೃತ್ಯವಾಗಿರಬೇಕೆಂಬ ಸಂಶಯವನ್ನು ಹುಟ್ಟಿಸಿದ್ದು, ಪೊಲೀಸರು ಈಗಾಗಲೇ ನೈಜ್ಯ ಆರೋಪಿಗಳನ್ನು ಬಂಧಿಸಿದ್ದರೂ ಸಮಗ್ರ ತನಿಖೆ ನಡೆಸಿ ಸತ್ಯವನ್ನು ಬಹಿರಂಗ ಪಡಿಸಬೇಕು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ)ದ ಉಡುಪಿ ಜಿಲ್ಲಾ ಸಮಿತಿ ಒತ್ತಾಯಿಸಿದೆ.
ಈ ಬಗ್ಗೆ ಇಂದು ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ರಿಯಾಜ್ ಕಡಂಬು, ಕುಂಜಾಲು ಪ್ರಕರಣದ ಹಿಂದೆ ಬಿಜೆಪಿ ಹಾಗೂ ಸಂಘ ಪರಿವಾರದ ಕೈವಾಡ ಇರುವ ಶಂಕೆ ಇದ್ದು, ಈ ಬಗ್ಗೆ ಪೊಲೀಸರು ವಿಸ್ತೃತವಾದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಏಕೆಂದರೆ ಈ ಘಟನೆ ನಡೆದ ಸಂದರ್ಭದಲ್ಲಿ ಪೊಲೀಸರು ತನಿಖೆ ನಡೆಸುವುದಕ್ಕಿಂತ ಮುಂಚೆಯೇ ಇದನ್ನು ಒಂದು ಸಮುದಾಯದವರೇ ಮಾಡಿದ್ದಾರೆ ಎಂಬ ರೀತಿಯಲ್ಲಿ ಉಡುಪಿ ಶಾಸಕರು ಹೇಳಿಕೆ ನೀಡಿದ್ದು, ಈ ಮೂಲಕ ಸೌಹಾರ್ದತೆಯನ್ನು ಕೆಡಿಸುವ ಪ್ರಯತ್ನವನ್ನು ಮಾಡಿದ್ದರು ಎಂದರು.
ಅಲ್ಲದೇ ಪೊಲೀಸರು ಪ್ರಕರಣದ ನಿಜವಾದ ಆರೋಪಿಗಳನ್ನು ಬಂಧಿಸಿದ ನಂತರವೂ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್‌ವೆಲ್ ಉಡುಪಿಯಲ್ಲಿ ಪತ್ರಿಕಾಗೋಷ್ಠಿ ಕರೆದು ಇದರ ಹಿಂದೆ ಮುಸ್ಲಿಮರಿ ದ್ದಾರೆ ಎಂಬ ಹೇಳಿಕೆಯನ್ನು ನೀಡಿ ಮುಸ್ಲಿಂ ಸಮುದಾಯವನ್ನು ಎತ್ತಿ ಕಟ್ಟುವ ಪ್ರಯತ್ನವನ್ನು ಮಾಡಿದ್ದರು ಎಂದು ರಿಯಾಜ್ ಹೇಳಿದರು.
ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡದೆ ಇಂತಹ ಘಟನೆಗಳನ್ನು ನಡೆಸುವ ಮೂಲಕ ಸೌಹಾರ್ದ ತೆಯನ್ನು ಕೆಡಿಸಿ ಇದರ ರಾಜಕೀಯ ಲಾಭವನ್ನು ಪಡೆಯುವ ಷಡ್ಯಂತ್ರವೂ ಈ ಘಟನೆ ಹಿಂದೆ ಇರುವ ಸಾಧ್ಯತೆ ಇದೆ. ಆದ್ದರಿಂದ ಪೊಲೀಸರು ಈ ಘಟನೆ ಪೂರ್ವ ನಿಯೋಜಿತವೇ ಎಂಬ ಬಗ್ಗೆ ಕೂಲಂಕಷ ತನಿಖೆ ನಡೆಸಿ ಇದರ ಹಿಂದಿರುವ ಕಾಣದ ಕೈಗಳನ್ನು ಬಂಧಿಸಬೇಕು ಎಂದು ಅವರು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಎಸ್‌ಡಿಪಿಐನ ಉಡುಪಿ ಜಿಲ್ಲಾಧ್ಯಕ್ಷ ಆಸಿಫ್ ಕೋಟೇಶ್ವರ, ಜಿಲ್ಲಾ ಉಪಾಧ್ಯಕ್ಷ ಹನೀಫ್ ಮುಳೂರು, ಉಡುಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಅಶ್ರಫ್ ಭಾವ ಹಾಗೂ ಕ್ಷೇತ್ರ ಸಮಿತಿ ಉಪಾಧ್ಯಕ್ಷ ರಹೀಮ್ ಆದಿಉಡುಪಿ ಉಪಸ್ಥಿತರಿದ್ದರು.