ಹಿರಿಯ ವಕೀಲರ ಮಾರ್ಗದರ್ಶನ ಕಿರಿಯರಿಗೆ ಅಗತ್ಯ: ನ್ಯಾ.ಇಂದಿರೇಶ್
ವಕೀಲರ ಸಂಘದಲ್ಲಿ ಶ್ರೀಪತಿ ಆಚಾರ್ಯರ ಭಾವಚಿತ್ರ ಅನಾವರಣ

ಉಡುಪಿ, ಜು.5: ವೃತ್ತಿ ಪ್ರಾರಂಭಿಸುವ ಕಿರಿಯ ವಕೀಲರು ಹಿರಿಯ, ಅನುಭವಿ ವಕೀಲರ ಮಾರ್ಗದರ್ಶ ನವಿಲ್ಲದಿದ್ದರೆ ಕಾನೂನು ಸಂಘರ್ಷವನ್ನು ಜಯಿಸಲು ಕಷ್ಟ ಪಡಬೇಕಾಗುತ್ತದೆ. ಹಿರಿಯರ ಗರಡಿಯಲ್ಲಿ ಪಳಗಿ, ಕಾನೂನಿನ ಅರಿವನ್ನು ಪಡೆಯಬೇಕು ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಾಧೀ ಶರೂ, ಉಡುಪಿ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿಗಳೂ ಆದ ನ್ಯಾ.ಇ.ಎಸ್.ಇಂದಿರೇಶ್ ಹೇಳಿದ್ದಾರೆ.
ಉಡುಪಿ ವಕೀಲರ ಸಂಘದ ವತಿಯಿಂದ, ಹಿರಿಯ ವಕೀಲಲಾಗಿದ್ದ ದಿ. ಅಲೆವೂರು ಶ್ರೀಪತಿ ಆಚಾರ್ಯರ ಭಾವಚಿತ್ರವನ್ನು ಶನಿವಾರ ಜಿಲ್ಲಾ ನ್ಯಾಯಾಲಯ ಸಭಾಂಗಣದಲ್ಲಿ ಅನಾವರಣಗೊಳಿಸಿ ಅವರು ಮಾತನಾಡುತಿದ್ದರು.
ಒಳ್ಳೆಯ ಹಿರಿಯ ವಕೀಲರ ಅಡಿಯಲ್ಲಿ ತರಬೇತಿ ಪಡೆದರೆ ಯುವ ನ್ಯಾಯವಾದಿಗಳು ಅರ್ಧದಷ್ಟು ಯಶಸ್ವಿಯಾಗುತ್ತಾರೆ. ಉಳಿದ ಅರ್ಧದಷ್ಟನ್ನು ಯುವ ವಕೀಲರು ತಮ್ಮ ಕಠಿಣ ಪರಿಶ್ರಮದಿಂದ ಸಾಧಿಸ ಬೇಕಾಗುತ್ತದೆ. ಇದು ವಕೀಲ ವೃತ್ತಿಗೆ ಬರುವ ಎಲ್ಲರಿಗೂ ಅನ್ವಯಿಸುತ್ತದೆ. ಈ ದಿಸೆಯಲ್ಲಿ ಶ್ರೀಪತಿ ಆಚಾರ್ಯರು ಎಲ್ಲರಿಗೂ ಮಾದರಿಯಾಗಿದ್ದಾರೆ. ಅವರು ಪ್ರತಿಯೊಬ್ಬರಿಗೂ ‘ಸೀನಿಯರ್’ ವಕೀಲರು ಹಾಗೂ ಎಲ್ಲರಿಗೂ ಆಚಾರ್ಯರು (ಗುರು) ಎಂದು ನ್ಯಾ.ಇಂದಿರೇಶ್ ನುಡಿದರು
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನ್ಯಾಯಾಧೀಶರೂ, ಶ್ರೀಪತಿ ಆಚಾರ್ಯರ ಮಾರ್ಗದರ್ಶನದಲ್ಲಿ ವಕೀಲ ವೃತ್ತಿ ಆರಂಭಿಸಿದ ನ್ಯಾ. ಎಂ.ಜಿ. ಉಮಾ ಮಾತನಾಡಿ, ಶ್ರೀಪತಿ ಆಚಾರ್ಯರು ಕೈಕೆಳಗೆ ವೃತ್ತಿ ಬದುಕು ಪ್ರಾರಂಭಿಸಿ ಅವರ ಆರ್ಶೀವಾದದಿಂದ ಇಂದು ಹೈಕೋರ್ಟಿನ ನ್ಯಾಯಮೂರ್ತಿಯಾಗಿರುವ ಸಾರ್ಥಕ್ಯ ಭಾವವಿದೆ ಎಂದರು.
ಶ್ರೀಪತಿ ಆಚಾರ್ಯರ ಶಿಷ್ಯೆಯಾಗಿ ನಾನು ವಕೀಲಿ ವೃತ್ತಿಯ ಎಲ್ಲಾ ಪಟ್ಟುಗಳನ್ನೂ ಕಲಿತಿದ್ದೇನೆ. ಏರುಧ್ವನಿ ಯಲ್ಲಿ ವಾದಿಸದಿದ್ದರೂ, ಮೃದು ಮಾತಿನ ಮೂಲಕವೇ ಎದುರಾಳಿಯನ್ನು ಮಣಿಸುವ ತಂತ್ರಗಾರಿಕೆ, ಪಾಟಿಸವಾಲಿನ ಚಾಕಚಕ್ಯತೆಯನ್ನು ಅವರಿಂದ ಕಲಿತಿದ್ದೇನೆ ಎಂದರು.
ಕರ್ನಾಟಕ ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿಗಳಾದ ನ್ಯಾ. ಎ.ವಿ. ಚಂದ್ರಶೇಖರ್ ಮಾತನಾಡಿ, ತನ್ನ ಕಕ್ಷಿದಾರನ ಪರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುವುದು, ಸಾಮಾಜಿಕ ಜವಾಬ್ದಾರಿ, ಕಾನೂನಿನ ಚೌಕಟ್ಟನ್ನು ಮೀರದೆ ಇರುವುದು, ಈ ಮೂರನ್ನು ಪ್ರತಿಯೊಬ್ಬ ವಕೀಲರು ಆಚಾರ್ಯ ರಿಂದ ಕಲಿಯಬೇಕಾಗಿದೆ ಎಂದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶ ಕಿರಣ್ ಎಸ್.ಗಂಗಣ್ಣನವರ್ ಹಾಗೂ ಶ್ರೀಪತಿ ಆಚಾರ್ಯರ ಪುತ್ರಿ ಚಂದನಾ ರಾವ್ ತಂದೆಯ ಕರ್ತವ್ಯ ನಿಷ್ಠೆಯನ್ನು ಹಂಚಿಕೊಂಡರು.
ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್ ಸ್ವಾಗತಿಸಿದರೆ, ದಿ.ಅಲೆವೂರು ಶ್ರೀಪತಿ ಆಚಾರ್ಯರ ಶಿಷ್ಯ, ಬೆಂಗಳೂರಿನಲ್ಲಿ ಹಿರಿಯ ಸಿವಿಲ್ ನ್ಯಾಯಧೀಶರಾಗಿರುವ ಗಣಪತಿ ಪ್ರಶಾಂತ್ ಗುರುಗಳ ಬಗ್ಗೆ ಪ್ರಾಸ್ತಾವಿಕ ಮಾತನಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಶ್ ಎ.ಆರ್ ವಂದಿಸಿದರು. ನ್ಯಾಯವಾದಿ ಸಹನಾ ಕುಂದರ್ ನಿರೂಪಿಸಿದರು.