ಕಾಂಗ್ರೆಸ್ ಮುಖಂಡರಿಂದ ವೈಯಕ್ತಿಕ ಟೀಕೆ: ಶಾಸಕ ಕಿರಣ್ ಕೊಡ್ಗಿ ಆರೋಪ

ಕುಂದಾಪುರ: ರಾಜ್ಯ ಕಾಂಗ್ರೆಸ್ ಸರಕಾರದ ಆಡಳಿತದ ವಿರುದ್ಧ ಬಿಜೆಪಿ ವತಿಯಿಂದ ಗ್ರಾಪಂಗಳ ಎದುರು ಪ್ರತಿಭಟನೆ ನಡೆಸಲಾಗಿತ್ತು. ಆದರೆ ಬಿಜೆಪಿಯವರು ಸರಕಾರದ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷದಿಂದ ಸತ್ಯದರ್ಶನ ಪ್ರತಿಭಟನಾ ಸಪ್ತಾಹ ಪ್ರತಿಭಟನೆ ನಡೆಸಿದೆ. ಬಿಜೆಪಿ ನಡೆಸಿದ ಪ್ರತಿಭಟನೆಯಲ್ಲಿ ಯಾವುದೇ ವ್ಯಕ್ತಿ ಅಥವಾ ರಾಜಕಾರಣಿ ವಿರುದ್ಧ ವೈಯಕ್ತಿಕ ಆರೋಪ ಮಾಡಿಲ್ಲ. ಆದರೆ ಕಾಂಗ್ರೆಸ್ ಮುಖಂಡರು ವೈಯಕ್ತಿಕ ಟೀಕೆ ನಡೆಸುತ್ತಿದ್ದಾರೆ ಎಂದು ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಆರೋಪಿಸಿದ್ದಾರೆ.
ಕುಂದಾಪುರದಲ್ಲಿ ಕರೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮುಖಂಡರು ಜನರ ಹಾಗೂ ಸಾರ್ವಜನಿಕರ ಹಾದಿ ತಪ್ಪಿಸುವ ಉದ್ದೇಶದಿಂದ ಶಾಸಕರು ಪ್ರಭಾವ ಬಳಸಿ 25 ಎಕರೆ ಗೇರು ಲೀಸ್ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ಮಾಜಿ ಶಾಸಕ ದಿವಂಗತ ಎ.ಜಿ.ಕೊಡ್ಗಿಯವರು ಹಾಗೂ ಅವರ ಐದು ಜನ ಮಕ್ಕಳು ಒಂದೇ ಒಂದು ಸೆಂಟ್ಸ್ ಗೇರು ಲೀಸ್ ಪಡೆದಿಲ್ಲ. ಈ ಬಗ್ಗೆ ಸೂಕ್ತ ದಾಖಲೆ ನೀಡಬೇಕು ಇಲ್ಲದಿದ್ದಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ತಾಪಂ, ಜಿಪಂ ಅಥವಾ ಇನ್ನಾವುದೋ ಚುನಾವಣೆ ಉದ್ದೇಶದಿಂದ ಬಿಜೆಪಿ ಪ್ರತಿಭಟನೆ ನಡೆಸಿಲ್ಲ. ಕಾಂಗ್ರೆಸ್ ಪಕ್ಷದ ಮುಖಂಡರ ಚಟುವಟಿಕೆಗಳನ್ನು ಗಮನಿಸಿದರೆ ಅವರೇ ಚುನಾವಣೆಗೆ ಸಿದ್ಧತೆ ನಡೆಸಿದಂತಿದೆ. ಸರಕಾರ ಯಾವುದೇ ಸಂದರ್ಭದಲ್ಲೂ ಜಿಪಂ. ತಾಪಂ.ಗೆ ಚುನಾವಣೆಗೆ ದಿನಾಂಕ ನಿಗದಿಪಡಿಸಿದರೆ ಚುನಾವಣೆ ಎದುರಿಸಲು ಬಿಜೆಪಿ ಸಿದ್ಧವಿದೆ. ಕರಾವಳಿ ಜಿಲ್ಲೆಗಳ ಅಭಿವೃದ್ಧಿ ಬಗ್ಗೆ ಸರಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಈ ಭಾಗದ ಸಮಸ್ಯೆಗಳನ್ನು ಬಗೆಹರಿಸಲು ನಿರ್ಲಕ್ಷ್ಯ ವಹಿಸು ತ್ತಿದೆ. ಸರಕಾರದ ಈ ಧೋರಣೆಯನ್ನು ಖಂಡಿಸಿ ಕರಾವಳಿಯ ಮೂರು ಜಿಲ್ಲೆಗಳ ಶಾಸಕರು ವಿಧಾನ ಸೌಧದ ಮುಂಭಾಗ ಹಾಗೂ ಸದನದ ಒಳಗೆ ಪ್ರತಿಭಟನೆ ನಡೆಸಲಿದ್ದೇವೆ ಎಂದು ಅವರು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುರೇಶ ಶೆಟ್ಟಿ ಕಾಡೂರು, ಬಿಜೆಪಿ ಕುಂದಾಪುರ ಮಂಡಲ ಅಧ್ಯಕ್ಷ ಸುರೇಶ ಶೆಟ್ಟಿ ಗೋಪಾಡಿ, ಪ್ರ.ಕಾ. ಸುಧೀರ್ ಕೆ.ಎಸ್., ಯುವಮೋರ್ಚಾ ಅಧ್ಯಕ್ಷ ಪ್ರಥ್ವಿರಾಜ್ ಶೆಟ್ಟಿ, ಜಿಲ್ಲಾ ಪ್ರಭಾರಿ ರಾಜೇಶ ಕಾವೇರಿ ಮೊದಲಾದವರು ಉಪಸ್ಥಿತರಿದ್ದರು.
ಶಾಸಕರು ಉತ್ತರ ನೀಡಲಿ: ವಿಕಾಸ್ ಹೆಗ್ಡೆ
ಸ್ಥಳೀಯ ಶಾಸಕರ ವೈಫಲ್ಯದ ಬಗ್ಗೆ ಹೇಳಿದ್ದಕ್ಕೆ ಶಾಸಕರು ನನ್ನ ಪ್ರಶ್ನೆಗೆ ಉತ್ತರ ನೀಡುವುದನ್ನು ಬಿಟ್ಟು ಅವರನ್ನು ಆಯ್ಕೆ ಮಾಡಿದ ಮತದಾರರ ಗಮನವನ್ನು ಬೇರೆಡೆಗೆ ವರ್ಗಾವಣೆ ಮಾಡುತ್ತಿದ್ದಾರೆಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಆರೋಪಿಸಿದ್ದಾರೆ.
ಕುಂದಾಪುರ ಶಾಸಕರು ಗೇರ್ ಲೀಸ್ ಅಲ್ಲಿ ಭೂ ಮಂಜೂರಾತಿ ಮಾಡಿ ಕೊಂಡರೆ ಅದು ಅವರ ಹಕ್ಕು ಅದನ್ನು ವಿರೋಧಿಸುವ ಅಧಿಕಾರ ನನಗೆ ಇಲ್ಲಾ ಎನ್ನುವ ಸಾಮಾನ್ಯ ಅರಿವು ನನಗಿದೆ. ಇವತ್ತು ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ ಅರ್ಜಿದಾರರ ಸುಮಾರು 10,000ಕ್ಕೂ ಮಿಕ್ಕಿ ಅರ್ಜಿಗಳು ತಿರಸ್ಕಾರವಾಗಿದೆ. ಇದು ಶಾಸಕರ ವೈಫಲ್ಯದಿಂದಲೇ ಆಗಿದೆ. ಶಾಸಕರು ಈ ಬಗ್ಗೆ ಉತ್ತರ ನೀಡಬೇಕು. ಇದು ಅವರ ಉತ್ತರದಾಯಿತ್ವ ಕೂಡ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.