ಪರ್ಕಳ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿರೋಧಿಸಿ ಪ್ರತಿಭಟನೆ
ತಿಂಗಳೊಳಗೆ ದುರಸ್ತಿ ಮಾಡದಿದ್ದರೆ ತೀವ್ರ ಹೋರಾಟ: ಡಾ.ಭಂಡಾರಿ

ಉಡುಪಿ, ಜು.6: ರಾಷ್ಟ್ರೀಯ ಹೆದ್ದಾರಿ 169ಎ ಕೆಳಪರ್ಕಳ ಭಾಗದಲ್ಲಿ ರಸ್ತೆಯ ದುರಾವಸ್ಥೆಯನ್ನು ಖಂಡಿಸಿ ಪರ್ಕಳ ರಸ್ತೆ ಹೋರಾಟ ಸಮಿತಿಯ ವತಿಯಿಂದ ರವಿವಾರ ಪರ್ಕಳ ನಾರಾಯಣಗುರು ಮಂದಿರದ ತಿರುವಿನ ಬಳಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮನೋವೈದ್ಯ ಡಾ.ಪಿ.ವಿ.ಭಂಡಾರಿ ಮಾತನಾಡಿ, ಪರ್ಕಳ ಪ್ರದೇಶದ ರಸ್ತೆಗಳ ಹದಗೆಟ್ಟ ಸ್ಥಿತಿಯಿಂದ ಸಾರ್ವಜನಿಕರು ತೀವ್ರ ವಾದ ತೊಂದರೆ ಅನುಭವಿಸುತಿದ್ದಾರೆ. ಸತತ ಮಳೆಯ ಕಾರಣ ದಿನದಿಂದ ದಿನಕ್ಕೆ ರಸ್ತೆ ಪರಿಸ್ಥಿತಿ ಹದಗೆಡುತ್ತಿದ್ದು, ಸಂಚಾರಕ್ಕೆ ಬಳಸಲು ಅಸಮ ರ್ಥವಾಗಿದೆ. ಆದುದರಿಂದ ಕೂಡಲೇ ಅದನ್ನು ಸಂಚಾರ ಯೋಗ್ಯ ವನ್ನಾಗಿ ಮಾಡಬೇಕು ಎಂದು ಆಗ್ರಹಿಸಿದರು.
ಜನಪ್ರತಿನಿಧಿಗಳು ಈ ರಸ್ತೆ ಕಾಮಗಾರಿ ಬಗ್ಗೆ ಸಾರ್ವಜನಿಕರಿಗೆ ಮೋಸ ಮಾಡುವ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ರಸ್ತೆ ಕಾಮಗಾರಿ ವಿವಾದ ಹೈಕೋರ್ಟ್‌ನಲ್ಲಿರುವ ಸಬೂಬು ನೀಡಲಾಗುತ್ತಿದೆ. ನಮಗೆ ಸಮಸ್ಯೆ ಇರುವುದು ಹೈಕೋರ್ಟ್‌ನಲ್ಲಿರುವ ರಸ್ತೆ ಅಲ್ಲ. ಹಳೆ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಹಿಸಿಕೊಂಡಿರುವ ಗುತ್ತಿಗೆದಾರರು ಕಾಮಗಾರಿ ಮುಗಿಯುವವರೆಗೆ ನಿರ್ವಹಣೆ ಮಾಡಬೇಕಾಗುತ್ತದೆ. ಆದರೆ ಹಳೆ ರಸ್ತೆ ನಿರ್ವಹಣೆಯೇ ಇಲ್ಲ. ಇದರಿಂದ ಸಾರ್ವಜನಿಕರು ಅನಾನುಕೂಲವಾಗುತ್ತಿದೆ. ನಮ್ಮ ಕಣ್ಣಿಗೆ ಮಣ್ಣು ಎರಚುವ ಕೆಲಸವನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮಾಡುತ್ತಿದ್ದಾರೆ ಎಂದರು.
ಈ ಹೋರಾಟದಲ್ಲಿ ಯಾವುದೇ ರಾಜಕೀಯ ಇಲ್ಲ. ಈ ಪ್ರತಿಭಟನೆ ಯಾವುದೇ ಪ್ರತಿನಿಧಿಗಳು, ಅಧಿಕಾರಿಗಳ ವಿರುದ್ಧವೂ ಅಲ್ಲ. ನಮಗೆ ನ್ಯಾಯ ಬೇಕು. ಈಗ ಇರುವ ಹಳೆಯ ರಸ್ತೆಯನ್ನೇ ದುರಸ್ತಿ ಮಾಡಿ ವಾಹನ ಸಂಚಾರಕ್ಕೆ ಯೋಗ್ಯವನ್ನಾಗಿ ಮಾಡಬೇಕು. ಇದು ಮೊದಲ ಹಂತದ ಹೋರಾಟ. ರಸ್ತೆ ದುರಸ್ತಿಯಾಗದಿದ್ದರೆ ನಾಲ್ಕು ವಾರಗಳ ಬಳಿಕ ಮತ್ತೆ ತೀವ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಸಂಚಾಲಕ ಅಮೃತ್ ಶೆಣೈ, ಪ್ರಮುಖರಾದ ಜೈವಿಠಲ್, ಅನ್ಸಾರ್ ಅಹ್ಮದ್, ರಮೇಶ್ ಕಾಂಚನ್, ವೈದ್ಯೆ ಡಾ.ಸುಲತಾ ಭಂಡಾರಿ, ರೋಟರಿ ಕ್ಲಬ್‌ನ ಮಂಜುನಾಥ ಉಪಾಧ್ಯ ಹಾಗೂ ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು, ಪರ್ಕಳ, ಮಂಜುನಾಥ್ ನಗರ ನಿವಾಸಿಗಳು ಉಪಸ್ಥಿತರಿದ್ದರು.