ವಿಶೇಷ ಅಧಿವೇಶನದಲ್ಲಿ ಉಡುಪಿ ಮಹಾನಗರ ಪಾಲಿಕೆ ಘೋಷಣೆ: ವಿನಯ್ ಕುಮಾರ್ ಸೊರಕೆ

ಉಡುಪಿ, ಜು.6: ಮಾರ್ಪಳ್ಳಿ ಶ್ರೀಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ವತಿಯಿಂದ ಉಚಿತವಾಗಿ ವಿವಿಧ ತಳಿಗಳ ಗಿಡಗಳ ವಿತರಣಾ ಕಾರ್ಯಕ್ರಮವನ್ನು ಉಮಾಮಹೇಶ್ವರ ಸಭಾ ಭವನದಲ್ಲಿ ರವಿವಾರ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಉದ್ಯಾವರ, ಅಲೆವೂರು, ಆತ್ರಾಡಿ, 80 ಬಡಗಬೆಟ್ಟು ಗ್ರಾಮ ಗಳು ಉಡುಪಿ ನಗರಕ್ಕೆ ಒಳಪಟ್ಟು ಮಹಾನಗರ ಪಾಲಿಕೆಯಾಗಿ ಶೀಘ್ರವೇ ಘೋಷಣೆಯಾಗುತ್ತದೆ. ಆಗ ಕುಡಿಯುವ ನೀರು ಹಾಗೂ ಹೆಚ್ಚಿನ ಅನುದಾನ ಈ ಭಾಗಕ್ಕೆ ಬರುತ್ತದೆ. ಈಗಾಗಲೇ ರಾಜ್ಯದ ಗ್ರಾಮೀಣಾ ಭಿವೃದ್ಧಿ ಇಲಾಖೆ, ಹಣಕಾಸಿನ ಇಲಾಖೆ ಮಹಾನಗರ ಪಾಲಿಕೆ ಆಗುವ ಬಗ್ಗೆ ಅನುಮೋದನೆ ನೀಡಿದೆ. ರಾಜ್ಯ ಸರಕಾರದ ವಿಶೇಷ ಅಧಿವೇಶನದಲ್ಲಿ ಘೋಷಣೆ ಒಂದೇ ಬಾಕಿ ಎಂದು ತಿಳಿಸಿದರು.
ಕಾಡು ಈಗ ನಾಡಾಗಿ ಪರಿವರ್ತನೆ ಆಗುತ್ತಿದೆ. ಪ್ರಕೃತಿ ಇದ್ದರೆ ಮನುಷ್ಯ ಜೀವಿಸಲು ಸಾಧ್ಯ, ಪ್ರತಿ ಯೊಂದು ಸಂದರ್ಭದಲ್ಲಿ ಪ್ರಕೃತಿ ನಮ್ಮ ಜೊತೆ ಇರುತ್ತದೆ, ನಾವು ಅದನ್ನು ರಕ್ಷಿಸುವ ಕೆಲಸ ಮಾಡಬೇಕು ಎಂದು ಅವರು ಹೇಳಿದರು.
ಅಧ್ಯಕ್ಷತೆಯನ್ನು ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಕಂಬಳಮನೆ ದಿನೇಶ್ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಪಂ ಮಾಜಿ ಸದಸ್ಯೆ ಗೀತಾಂಜಲಿ ಸುವರ್ಣ, ಅಲೆವೂರು ಗ್ರಾಪಂ ಮಾಜಿ ಅಧ್ಯಕ್ಷ ಅಲೆವೂರು ಹರೀಶ್ ಕಿಣಿ, ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮ, ತ್ರಿಶಾ ಸಮೂಹ ಸಂಸ್ಥೆಯ ಮುಖ್ಯಸ್ಥ ಗೋಪಾಲ ಕೃಷ್ಣ ರಾವ್, ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿ ಪ್ರತ್ಯಕ್ಷ ಕಾಮತ್, ಸ್ಥಳೀಯ ಗ್ರಾಪಂ ಸದಸ್ಯ ಸುಧಾಕರ್ ಪೂಜಾರಿ, ಶಂಕರ್ ಜಿ.ದೇವಾಡಿಗ ಮಾರ್ಪಳ್ಳಿ, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಶೇಖರ್ ಸುವರ್ಣ , ಪಾಂಡುರಂಗ ನಾಯ್ಕ್, ಉಮೇಶ್ ಮಾರ್ಪಳ್ಳಿ, ಶಂಕರ ಆಚಾರ್ಯ, ಚಂದ್ರಾವತಿ, ಅರ್ಚಕ ಅನಂತ ಉಪಾಧ್ಯ, ಉಪಸ್ಥಿತರಿದ್ದರು.
ಲಕ್ಷ್ಮೀನಾರಾಯಣ ರಾವ್ ಸ್ವಾಗತಿಸಿದರು. ವಿಜಯಲಕ್ಷ್ಮಿ ಎಂ. ವಂದಿಸಿದರು. ವಿಷ್ಣುಮೂರ್ತಿ ಉಪಾಧ್ಯಾಯ ಕಾರ್ಯಕ್ರಮ ನಿರೂಪಿಸಿದರು.