ರೈತರಿಗೆ ಯಂತ್ರಶ್ರೀ ಭತ್ತದ ಕೃಷಿ ತರಬೇತಿ

ಶಿರ್ವ, ಜು.7: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಕಾಪು ತಾಲೂಕು ವತಿಯಿಂದ ಯಂತ್ರಶ್ರೀ ಕೃಷಿ ತರಬೇತಿ ಕಾರ್ಯಕ್ರಮ ಬೆಳ್ಳೆ ಗ್ರಾಮ ಪಂಚಾಯತ್ ವ್ಯಾಪಿತಿಯ ಕಟ್ಟಿಂಗೇರಿ ಶ್ರೀಬ್ರಹ್ಮಲಿಂಗೇಶ್ವರ ದೇವಳದ ವಠಾರದಲ್ಲಿ ರವಿವಾರ ಜರಗಿತು.
ಸಂಪನ್ಮೂಲ ವ್ಯಕ್ತಿಯಾಗಿ ಪ್ರಗತಿಪರ ಕೃಷಿಕ ನಿತ್ಯಾನಂದ ನಾಯಕ್ ಪಾಲಮೆ ಸಾಂಪ್ರದಾಯಿಕ ಪದ್ಧತಿ ಹಾಗೂ ಆಧುನಿಕ ಪದ್ದತಿಯಲ್ಲಿ ಯಂತ್ರಶ್ರೀ ನಾಟಿಯ ಪ್ರಯೋಜನದ ಬಗ್ಗೆ ಸವಿವರ ಮಾಹಿತಿ ನೀಡಿದರು. ರೈತರೊಂದಿಗೆ ಸಂವಾದ ನಡೆಸಿ ಸಂಶಯ ನಿವಾರಿಸಿದರು.
ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯೆಕ್ಷೆ ಸುಜಾತಾ ಸುವರ್ಣ ವಹಿಸಿದ್ದರು. ತಾಲೂಕು ನೋಡೆಲ್ ಅಧಿಕಾರಿ ಶಿವಾನಂದ ಬೆಳೆ ವಿಮೆ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಕೃಷಿ ಮೇಲ್ವಿಚಾರಕ ದೇವೇಂದ್ರ ಇವರು ಯಂತ್ರಶ್ರೀ ಬೀಜೋಪಚಾರ, ನಾಟಿ ಗದ್ದೆ ತಯಾರಿ, ಸಸಿ ಮಡಿ ತಯಾರಿ, ಬಗ್ಗೆ ಮಾಹಿತಿ ನೀಡಿದರು.
ಸೇವಾ ಪ್ರತಿನಿಧಿ ದಿವ್ಯಾ ಸ್ವಾಗತಿಸಿದರು. ಲಕ್ಷ್ಮೀ ವಂದಿಸಿದರು. ಬೆಳ್ಳೆ ಸೇವಾದಾರರಾದ ಪ್ರಮೀಳಾ, ಯಂತ್ರಶ್ರೀ ನಾಟಿ ಮಾಡುವ ರೈತರು ಉಪಸ್ಥಿತರಿದ್ದರು.





