ಉಡುಪಿ: ಗಾಳಿಗೆ ಕಾರ್ಕಳ, ಕುಂದಾಪುರದಲ್ಲಿ ಅಡಿಕೆ ತೋಟಕ್ಕೆ ಹಾನಿ

ಉಡುಪಿ, ಜು.7: ಕಳೆದ 24 ಗಂಟೆಗಳಲ್ಲಿ ಮಳೆಯ ಪ್ರಮಾಣದಲ್ಲಿ ಗಣನೀಯ ಇಳಿಮುಖ ಕಂಡು ಬಂದಿದ್ದರೂ, ಆಗಾಗ ಮಳೆಯೊಂದಿಗೆ ಬೀಸುವ ಗಾಳಿಗೆ ಜಿಲ್ಲೆಯಲ್ಲಿ ಮನೆಗಳಿಗೆ ಹಾಗೂ ಸೊತ್ತುಗಳಿಗೆ ಆಗುವ ಹಾನಿ ಹೆಚ್ಚುತ್ತಿದೆ.
ರವಿವಾರ ಬೀಸಿದ ಗಾಳಿಗೆ ಕಾರ್ಕಳ ಹಾಗೂ ಕುಂದಾಪುರ ತಾಲೂಕುಗಳಲ್ಲಿ ಅನೇಕ ತೋಟಗಾರಿಕಾ ಬೆಳೆಗಳಿಗೆ ಹಾನಿಯುಂಟಾಗಿದ್ದರೆ, ಉಳಿದಂತೆ ಕನಿಷ್ಠ ಆರು ಮನೆಗಳಿಗೆ ಹಾನಿಯುಂಟಾಗಿದ್ದು 3.5 ಲಕ್ಷ ರೂ.ಗಳಿಗೂ ಅಧಿಕ ನಷ್ಟದ ವರದಿಗಳು ಬಂದಿವೆ.
ಕಾರ್ಕಳ ತಾಲೂಕು ಈದು ಗ್ರಾಮದ ದಿನೇಶ್ ಹಾಗೂ ಕುಂದಾಪುರ ತಾಲೂಕು ಸೇನಾಪುರದ ಶ್ರೀಧರ ಶೆಟ್ಟಿ ಎಂಬವರ ತೋಟಗಳಿಗೆ ಗಾಳಿಯಿಂದ ಅಪಾರ ಹಾನಿಯಾಗಿದೆ. ತೋಟದ ಅಡಿಕೆ ಮರಗಳು ಧರಾಶಾಯಿಯಾಗಿದ್ದು 50ಸಾವಿರ ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ.
ಕುಂದಾಪುರ ಕಸಬಾದ ಶ್ರೀಧರ್ ಶೇರಿಗಾರ್ ಎಂಬವರ ಮನೆಯ ಗೋಡೆ ಗಾಳಿ-ಮಳೆಗೆ ಕುಸಿದಿದ್ದು ಒಂದು ಲಕ್ಷ ರೂ.ಗಳಿಗೂ ಅಧಿಕ ಹಾನಿ ಸಂಭವಿಸಿದೆ. ಅದೇ ಗ್ರಾಮದ ಅಬ್ದುಲ್ ಖಾದರ್ ಎಂಬವರ ಮನೆಯ ಗೋಡೆ ಕುಸಿದು 50ಸಾವಿರ ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ.
ಕಾರ್ಕಳ ತಾಲೂಕು ಎರ್ಲಪಾಡಿ ಗ್ರಾಮದ ವಿಲಿಯಂ ಡಿಸೋಜ ಅವರ ಮನೆಗೆ ಗಾಳಿ-ಮಳೆಯಿಂದ ಭಾಗಶ: ಹಾನಿಯಾಗಿದ್ದು 70,000ರೂ. ಹಾಗೂ ನಿಟ್ಟೆ ಗ್ರಾಮದ ಲಿಯೊ ಸಲ್ಡಾನ ಎಂಬವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದ್ದು 40,000ರೂ.ಗಳಿಗೂ ಅಧಿಕ ನಷ್ಟ ಉಂಟಾಗಿರುವುದಾಗಿ ಅಂದಾಜಿಸಲಾಗಿದೆ.
ಕಾಪು ತಾಲೂಕು ಪಡು ಗ್ರಾಮದ ಗುಲಾಬಿ ಬಂಗೇರ ಅವರ ವಾಸದ ಮನೆಯ ಗೋಡೆ ಭಾಗಶ: ಕುಸಿದಿದ್ದು 35,000ರೂ. ಹಾಗೂ ಶಿರ್ವ ಗ್ರಾಮದ ಸಂಪ ಪೂಜಾರ್ತಿ ಅವರ ಮನೆ ಮೇಲೆ ಮರ ಬಿದ್ದು 25,000ರೂ. ನಷ್ಟ ಉಂಟಾಗಿರುವುದು ವರದಿಯಾಗಿದೆ.
ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 32.6ಮಿ.ಮೀ. ಮಳೆಯಾಗಿದೆ. ಹೆಬ್ರಿಯಲ್ಲಿ ಅತ್ಯಧಿಕ 51.7ಮಿ.ಮೀ. ಮಳೆಯಾದರೆ, ಬೈಂದೂರಿನಲ್ಲಿ 37.1, ಕಾರ್ಕಳದಲ್ಲಿ 33.3, ಕಂದಾಪುರದಲ್ಲಿ 32.9, ಬ್ರಹ್ಮಾವರದಲ್ಲಿ 21.8, ಉಡುಪಿಯಲ್ಲಿ 20.7 ಹಾಗೂ ಕಾಪುವಿನಲ್ಲಿ 14.4ಮಿ.ಮೀ ಮಳೆಯಾಗಿದೆ.
ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಮುಂದುವರಿದಿದ್ದು, ಇನ್ನೂ ಎರಡು ದಿನಗಳ ಕಾಲ ಕರಾವಳಿ ಭಾಗದಲ್ಲಿ ಗಂಟೆಗೆ 40ರಿಂದ 50ಕಿ.ಮೀ. ವೇಗದ ಗಾಳಿಯೊಂದಿಗೆ ಬಿರುಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಮ್ಮ ಮುನ್ಸೂಚನೆಯಲ್ಲಿ ತಿಳಿಸಿದೆ.







