ಹಣಕಾಸಿನ ಯಾವುದೇ ಕೊರತೆ ಕಾಣ್ತಾ ಇಲ್ಲ: ಗೃಹ ಸಚಿವ ಜಿ.ಪರಮೇಶ್ವರ್

ಉಡುಪಿ, ಜು.8: ನಮ್ಮ ಸರಕಾರ ನೀಡುತ್ತಿರುವ ಗ್ಯಾರಂಟಿ ಯೋಜನೆಗಳಿಂದ ಯಾವುದೇ ತೊಂದರೆ ಆಗಿದೆ ಎಂದು ನನಗೆ ಅನಿಸುತಿಲ್ಲ. ರಾಜ್ಯ ಸರಕಾರದಲ್ಲಿ ಜವಾಬ್ದಾರಿ ಸ್ಥಾನದಲ್ಲಿರುವ ನಾನು ಈ ಮಾತು ಹೇಳ್ತಾ ಇದ್ದೇನೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಬೆಳ್ಮಣ್ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪಕ್ಷದ ಹಿರಿಯ ನಾಯಕ ಬಸವರಾಜ ರಾಯರೆಡ್ಡಿ ಇತ್ತೀಚೆಗೆ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸುತಿದ್ದರು.
ಮುಖ್ಯಮಂತ್ರಿಗಳು ಬಜೆಟ್ ಕೊಡುವಾಗ 52,000 ಕೋಟಿ ರೂ.ಗಳನ್ನು ಗ್ಯಾರಂಟಿಗಾಗಿ ಪ್ರತ್ಯೇಕವಾಗಿ ಇಟ್ಟಿದ್ದಾರೆ. ಸುಮಾರು 30ಸಾವಿರ ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಬಜೆಟ್ ಮಾಡಿದ್ದಾರೆ. ಕೇವಲ 16 ಸಾವಿ ರ ಕೋಟಿ ವ್ಯತ್ಯಾಸ. ಅದನ್ನು ನಿರ್ವಹಿಸುವ ಶಕ್ತಿ ನಮಗಿದೆ ಎಂದರು.
ಬರೆದವನೇ ನಾನು!: ಈ ಗ್ಯಾರಂಟಿಗಳನ್ನು ಬರೆದವನೇ ನಾನು. ಪ್ರಣಾಳಿಕೆ ಸಮಿತಿ ಅಧ್ಯಕ್ಷನಾಗಿ ಹೈಕ ಮಾಂಡ್ ಜೊತೆ ಸೇರಿ ಇದನ್ನು ನಾನೇ ಬರೆದಿದ್ದೆ ಎಂದು ಹೇಳಿದ ಡಾ.ಪರಮೇಶ್ವರ್, ಇವತ್ತು ಅದನ್ನು ಅನುಷ್ಠಾನ ಮಾಡುತಿದ್ದೇವೆ. ಸಣ್ಣಪುಟ್ಟ ವ್ಯತ್ಯಾಸ ಇದ್ದೇಇರುತ್ತೆ. ಆದರೆ ನಮಗೆ ಹಣಕಾಸಿನ ಯಾವುದೇ ಕೊರತೆ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದರು.
18 ಸಾವಿರ ಹುದ್ದೆ ಖಾಲಿ: ಹಿಂದಿನ ಸರಕಾರ ಸರಿಯಾಗಿ ನೇಮಕಾತಿ ನಡೆಸದ ಕಾರಣ 18 ಸಾವಿರ ಪೊಲೀಸ್ ಹುದ್ದೆಗಳು ಖಾಲಿ ಇವೆ. ಅವರು ಮಾಡಿದ್ದರೆ ಈ ಸಮಸ್ಯೆ ಬರ್ತಾ ಇರಲಿಲ್ಲ. ಕಳೆದ ನಾಲ್ಕೈದು ವರ್ಷಗಳಿಂದ ಈ ಸಮಸ್ಯೆಯಾಗಿದೆ ಎಂದು ಗೃಹ ಸಚಿವರು ನುಡಿದರು.
ನಿವೃತ್ತಿಯಾದಾಗಲೇ ನೇಮಕಾತಿ ಮಾಡಿಕೊಳ್ಳಬೇಕಿತ್ತು. ಈಗ ಆ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದೇವೆ. ಒಳಮೀಸಲಾತಿ ಕಾರಣಕ್ಕೆ ಎರಡು- ಮೂರು ತಿಂಗಳು ವಿಳಂಬವಾಗಿದೆ. ಈಗಾಗಲೇ ನೇಮಕಾತಿ ಪ್ರಕ್ರಿಯೆ ಪ್ರಾರಂಭಗೊಂಡಿದೆ. ಪಿಎಸ್‌ಐ ಹಗರಣದಿಂದ ನೇಮಕಾತಿ ನಿಲ್ಲುವಂತಾಗಿತ್ತು. ಈಗಾಗಲೇ 545 ಮಂದಿ ಆದೇಶ ಕೊಟ್ಟಿದ್ದೇವೆ. ಇನ್ನು 402 ಮಂದಿಗೆ ಇನ್ನು ವಾರ-15 ದಿನಗಳಲ್ಲಿ ನೇಮಕಾತಿ ಆದೇಶ ಹೋಗಲಿದೆ. ಆ ಬಳಿಕ 600 ಮಂದಿ ಸಬ್ ಇನ್‌ಸ್ಪೆಕ್ಟರ್ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಒಂದೂವರೆ ಸಾವಿರ ಸಬ್ ಇನ್‌ಸ್ಪೆಕ್ಟರ್ ಹುದ್ದೆ ಖಾಲಿ ಇಟ್ಕೊಂಡ್ರೆ ಸಮಸ್ಯೆ ಆಗದೇ ಇರುತ್ತಾ ಎಂದವರು ಪ್ರಶ್ನಿಸಿದರು.







