ಶಿರ್ವ: ಮಹಿಳೆಯಿಂದ ಮೂರು ಚಿನ್ನದಂಗಡಿಗಳಿಗೆ ವಂಚನೆ ಆರೋಪ; ಪ್ರಕರಣ ದಾಖಲು

ಶಿರ್ವ, ಜು.10: ಫರೀದಾ ಎಂಬ ಮಹಿಳೆ ಶಿರ್ವದ ಮೂರು ಚಿನ್ನದಂಗಡಿಗಳಿಂದ ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣಗಳನ್ನು ಖರೀದಿಸಿ ಹಣ ನೀಡದೇ ವಂಚಿಸಿರುವ ಬಗ್ಗೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ವರ್ಷದ ಮಾ.8ರಿಂದ 11 ನಡುವಿನ ಅವಧಿಯಲ್ಲಿ ಶಿರ್ವದ ನ್ಯೂ ಭಾರ್ಗವಿ ಜುವೆಲ್ಲರ್ಸ್ ಎಂಬ ಚಿನ್ನಾಭರಣ ಅಂಗಡಿಯಲ್ಲಿ 1,78,000ರೂ. ಮೌಲ್ಯದ 69.165 ಗ್ರಾಂ ತೂಕದ ವಿವಿಧ ಮಾದರಿ ಚಿನ್ನಾಭರಣಗಳನ್ನು ಅಪ್ಸಲ್ ಹಾಗೂ ಇತರ ಇಬ್ಬರು ಸಂಬಂಧಿಕರ ಮೂಲಕ ಖರೀದಿಸಿ ಬಿಲ್ಲು ಮೊತ್ತ ಪಾವತಿಸದೇ ವಂಚನೆ ಎಸಗಿರುವ ಫರೀದಾ, ಶಿರ್ವದ ಕೃಪಾ ಜುವೆಲ್ಲರ್ಸ್‌ನಿಂದಲೂ ಮಾ.16ರಂದು 10.740 ಗ್ರಾಂ ತೂಕ ಚಿನ್ನಾಭರಣ ಖರೀದಿ ವಂಚಿಸಿರುವುದಾಗಿ ದೂರಲಾಗಿದೆ.
ಈ ಎರಡು ಪ್ರಕರಣಗಳಲ್ಲದೇ ಶಿರ್ವ ಪೇಟೆಯಲ್ಲಿರುವ ಪುಷ್ಪಾ ಜುವೆಲ್ಲರ್ಸ್‌ನಲ್ಲಿ ಎಪ್ರಿಲ್ 9ರಂದು 18.660 ಗ್ರಾಂ ತೂಕದ ವಿವಿಧ ಮಾದರಿ ಚಿನ್ನಾಭರಣ ಖರೀದಿಸಿ ಬಿಲ್ಲು ಮೊತ್ತ ಪಾವತಿಸದೇ ಮೋಸ, ವಂಚನೆ ಮಾಡಿರುವುದಾಗಿ ದೂರು ನೀಡಲಾಗಿದೆ. ಮೂರು ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತಿದ್ದಾರೆ.





