ಸಮುದ್ರದಲ್ಲಿ ದೋಣಿ ಮಗುಚಿ ಬಿದ್ದು ಮೀನುಗಾರ ಮೃತ್ಯು

ಮಲ್ಪೆ, ಜು.11: ಮೀನುಗಾರಿಕೆ ಮಾಡುತ್ತಿದ್ದ ವೇಳೆ ಸಮುದ್ರದಲ್ಲಿ ದೋಣಿ ಮಗುಚಿ ಬಿದ್ದ ಪರಿಣಾಮ ಮೀನುಗಾರರೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಜು.11ರಂದು ಬೆಳಗ್ಗೆ ನಡೆದಿದೆ.
ಮೃತರನ್ನು ಪಿತ್ರೋಡಿ ನಿವಾಸಿ ನೀಲಾಧರ ಜಿ.ತಿಂಗಳಾಯ(51) ಎಂದು ಗುರುತಿಸಲಾಗಿದೆ. ಇವರು ಸೇರಿದಂತೆ ಸುಮಾರು 24 ಮಂದಿ ಮೀನುಗಾರರು ಮಲ್ಪೆ ಬಂದರಿನಿಂದ ಅರಬ್ಬೀ ಸಮುದ್ರಕ್ಕೆ ದೋಣಿ ಯಲ್ಲಿ ಹೋಗಿ ಬಲೆ ಹಾಕಲು ತಯಾರಿ ಮಾಡುತ್ತಿದ್ದು, ಈ ವೇಳೆ ಒಮ್ಮಲೆ ಬಂದ ಸುಳಿಗಾಳಿಗೆ ದೋಣಿ ಸಿಕ್ಕಿ ಹಾಕಿ ಮಗುಚಿ ಬಿತ್ತೆನ್ನಲಾಗಿದೆ.
ಇದರಿಂದ ನೀಲಾಧರ ತಿಂಗಳಾಯ ಸಮುದ್ರದ ನೀರಿನಲ್ಲಿದ್ದ ಮೀನಿನ ಬಲೆಗೆ ಸಿಲುಕಿ ಹಾಕಿಕೊಂಡರು. ಉಳಿದ ಮೀನುಗಾರರು ಅವರನ್ನು ಬಲೆಯಿಂದ ಬಿಡಿಸಿ ದಡಕ್ಕೆ ತಂದು ನೋಡಿದಾಗ, ಅವರು ಮೃತಪಟ್ಟಿ ರುವುದು ಕಂಡುಬಂದಿದೆ. ಉಳಿದ ಮೀನುಗಾರರು ಈಜಿಕೊಂಡು ದಡಕ್ಕೆ ಬಂದು ಅಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪರಿಹಾರಕ್ಕೆ ಒತ್ತಾಯ: ಮಳೆಗಾಲದಲ್ಲಿ ನಾಡದೋಣಿ ಮೀನುಗಾರಿಕೆ ನಡೆಸುವ ವೇಳೆ ಮೃತಪಟ್ಟ ಕುಟುಂಬಗಳಿಗೆ ತಲಾ ಕನಿಷ್ಟ 15ಲಕ್ಷ ರೂ. ಪರಿಹಾರ ನೀಡಬೇಕು ಎಂದು ಉಡುಪಿ ಜಿಲ್ಲಾ ಮೀನುಗಾರರ ಮತ್ತು ಮೀನು ಕಾರ್ಮಿಕ ಸಂಘ(ಸಿಐಟಿಯು) ಆಗ್ರಹಿಸಿದೆ.
ಮೀನುಗಾರರಿಗೆ ತೆರಳುವ ಕಾರ್ಮಿಕರಿಗೆ ಜಿಲ್ಲಾಡಳಿತ ಹಾಗೂ ಮೀನುಗಾರಿಕಾ ಇಲಾಖೆ ಹಾಗೂ ಸರಕಾರ ಸೂಕ್ತ ಮಾಹಿತಿ, ಸೂಚನೆಗಳನ್ನು ನೀಡಬೇಕು. ಕರಾವಳಿ ಕಾವಲು ಪಡೆ ಗಸ್ತು ಮಳೆಗಾಲದ ಸಮಯದಲ್ಲಿ ನಾಡದೋಣಿಗಳ ಹೆಚ್ಚಿನ ಗಮನ ಕೊಡಬೇಕು ಎಂದು ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.







