ಯಕ್ಷಗಾನದ ಮೂಲ ಸ್ವರೂಪಕ್ಕೆ ಅಪಚಾರ ಮಾಡಬೇಡಿ: ಡಾ.ಭೀಮೇಶ್ವರ ಜೋಶಿ

ಉಡುಪಿ, ಜು.12: ಯುವ ಯಕ್ಷಗಾನ ಕಲಾವಿದರು ಯಕ್ಷಗಾನದ ಮೂಲ ಸ್ವರೂಪ, ತತ್ವ ಹಾಗೂ ಆದರ್ಶಗಳಿಗೆ ಮತ್ತು ಅದರ ಶ್ರೇಷ್ಠತೆಗೆ ಯಾವತ್ತೂ ಅಪಚಾರ ಆಗದೆ ನೋಡಿಕೊಂಡು ತಮ್ಮ ಸಾಧನೆಯನ್ನು ಸಮಾಜಕ್ಕೆ ವ್ಯಕ್ತಪಡಿಸ ಬೇಕು. ಆ ಮೂಲಕ ಕಲಾವಿದರು ತಮ್ಮನ್ನು ತಾವು ನಿಯಂತ್ರಿಸ ಬೇಕು ಎಂದು ಹೊರನಾಡು ಶ್ರೀಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮದರ್ಶಿ ಡಾ.ಜಿ. ಭೀಮೇಶ್ವರ ಜೋಶಿ ಹೇಳಿದ್ದಾರೆ.
ಯಕ್ಷಗಾನ ಕಲಾರಂಗದ ವತಿಯಿಂದ ಉಡುಪಿ ಐವೈಸಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾದ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಅಗಲಿದ ಬಹಳಷ್ಟು ಹಿರಿಯ ದಿಗ್ಗಜರು ಯಕ್ಷಗಾನ ರಂಗವನ್ನು ಜೀವಂತವಾಗಿರಿಸುವಲ್ಲಿ ಭದ್ರ ಬುನಾದಿ ಹಾಕಿ ಕೊಟ್ಟಿದ್ದಾರೆ. ಅವರ ಮಾರ್ಗ ದರ್ಶನ ತರಬೇತಿಯಲ್ಲಿ ಪಡೆದ ಸಾವಿರಾರು ಮಂದಿ ಕಲಾವಿದರು ಇಂದಿಗೂ ಜೀವಂತವಾಗಿದ್ದಾರೆ. ಹಾಗಾಗಿ ಈ ರಂಗಕ್ಕೆ ಯಾವತ್ತೂ ಸಾವು ಬರುವುದಿಲ್ಲ. ರಂಗದ ಶ್ರೇಷ್ಠತೆಗೆ ಯಾವುದೇ ಕೊರತೆ ಎದುರಾಗುವುದಿಲ್ಲ ಎಂದರು.
ಆದರೆ ಈಗಿನ ಕಲಾವಿದರು ಚಪ್ಪಾಲೆಗಾಗಿ ಅಥವಾ ಆರ್ಥಿಕ ಸೃಮೃದ್ಧಿಗಾಗಿ ಈ ಕಲೆಯನ್ನು ಬಲಿ ಕೊಡ ಬಾರದು. ಇಂದು ಕಲೆಯನ್ನು ಕೆಳ ಮಟ್ಟಕ್ಕೆ ತಂದು ನಿಲ್ಲಿಸಿರುವುದು ನಾವು ನೋಡಿದ್ದೇವೆ ಮತ್ತು ಸಿನೆಮಾ ರಂಗದಲ್ಲಿ ತರುವ ಕೆಲಸ ಮಾಡಲಾಗುತ್ತಿದೆ. ಇದೆಲ್ಲ ಇನ್ನು ಆಗಬಾರದು. ಆದುದರಿಂದ ಯಕ್ಷಗಾನ ಮೂಲಸ್ವರೂಪದಲ್ಲಿ ವಿಜೃಂಭಿಸಬೇಕು. ಈ ನಿಟ್ಟಿನಲ್ಲಿ ಕಲಾವಿದರು ಬದ್ಧತೆ ತೋರಿಸಬೇಕು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಹಿರಿಯ ತಾಳಮದ್ದಲೆ ಅರ್ಥದಾರಿ ಡಾ.ಜಿ.ಎಲ್. ಹೆಗಡೆ ಕುಮಟಾ ಅವರಿಗೆ ಮಟ್ಟಿ ಮುರಳೀಧರ್ ರಾವ್ ಪ್ರಶಸ್ತಿ ಮತ್ತು ಹಿರಿಯ ತಾಳಮದ್ದಲೆ ಅರ್ಥಧಾರಿ ಸರ್ಪಂಗಳ ಈಶ್ವರ ಭಟ್ ಅವರಿಗೆ ಪೆರ್ಲ ಕೃಷ್ಣ ಭಟ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಹಿರಿಯ ಸಾಮಾಜಿಕ ಧುರೀಣ ಕೃಷ್ಣ ಪ್ರಸಾದ ಅಡ್ಯಂತಾಯ, ಕಲಾರಂಗದ ಉಪಾಧ್ಯಕ್ಷ ಎಸ್.ವಿ.ಭಟ್ ಉಪಸ್ಥಿತರಿದ್ದರು.
ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಹೆಗಡೆ ಸನ್ಮಾನಿತರ ಪರಿಚಯ ಮಾಡಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮುನ್ನ ಕರ್ಣಾರ್ಜುನ ತಾಳಮದ್ದಲೆ ನಡೆಯಿತು.







