ಕರಾವಳಿ ಜಿಲ್ಲೆ ದೇವರುಗಳ ತವರೂರು: ಸಚಿವ ರಾಮಲಿಂಗಾ ರೆಡ್ಡಿ
ಪೆರ್ಡೂರು ಶ್ರೀಅನಂತಪದ್ಮನಾಭ ದೇವಳದ ನಗಾರಿ ಗೋಪುರಕ್ಕೆ ಶಿಲಾನ್ಯಾಸ

ಉಡುಪಿ: ರಾಜ್ಯದಲ್ಲಿ 25ಲಕ್ಷಕ್ಕಿಂತಲೂ ಹೆಚ್ಚು ಆದಾಯ ಇರುವ 205 ಎ ಗ್ರೇಡ್ ದೇವಸ್ಥಾನಗಳಿವೆ. 5ಲಕ್ಷದಿಂದ 25ಲಕ್ಷ ರೂ. ಆದಾಯ ಹೊಂದಿರುವ 193 ಬಿ ಗ್ರೇಡ್ ದೇವಸ್ಥಾನಗಳಿವೆ. 5ಲಕ್ಷ ರೂ.ಗಿಂತ ಕಡಿಮೆ ಆದಾಯ ಇರುವ 34 ಸಾವಿರ ದೇವಸ್ಥಾನಗಳಿವೆ. ಆದರೆ ಎ ಗ್ರೇಡ್ ಮತ್ತು ಬಿ ಗ್ರೇಡ್ ದೇವಸ್ಥಾನಗಳ ಪೈಕಿ ಮೂರನೇ ಒಂದು ಭಾಗದಷ್ಟು ದೇವಸ್ಥಾನಗಳು ಅವಿಭಜಿತ ದ.ಕ. ಜಿಲ್ಲೆಗಳಲ್ಲಿವೆ ಎಂದು ರಾಜ್ಯ ಮುಜರಾಯಿ ಹಾಗೂ ಸಾರಿಗೆ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಇತಿಹಾಸ ಪ್ರಸಿದ್ಧ ಪುರಾತನ ಪೆರ್ಡೂರು ಶ್ರೀಅನಂತಪದ್ಮನಾಭ ದೇವಸ್ಥಾನದ ಮೊದಲ ಹಂತದ ಜೀರ್ಣೋದ್ಧಾರದ ಪ್ರಯುಕ್ತ 7 ಕೋಟಿಗೂ ಅಧಿಕ ವೆಚ್ಚದಲ್ಲಿ ಭವ್ಯವಾಗಿ ನಿರ್ಮಾಣಗೊಳ್ಳಲಿರುವ ದೇಗುಲದ ನಗಾರಿ ಗೋಪುರದ ಶಿಲಾನ್ಯಾಸವನ್ನು ರವಿವಾರ ನೆರವೇರಿಸಿ ಅವರು ಮಾತನಾಡುತಿದ್ದರು.
ಈ ಎರಡು ಜಿಲ್ಲೆಗಳಲ್ಲಿ ಅತೀ ಹೆಚ್ಚು ದೇವಸ್ಥಾನಗಳಿವೆ. ಕರಾವಳಿ ಭಾಗದ ದೇಗುಲದ ಆಡಳಿತ ಮಂಡಳಿಯವರು ಯಾವುದೇ ಒಂದು ಕಪ್ಪು ಚುಕ್ಕೆ ಇಲ್ಲದೆ, ಬಹಳ ಶಿಸ್ತಿನಿಂದ ದೇವಸ್ಥಾನವನ್ನು ನಡೆಸಿಕೊಂಡು ಹೋಗುತ್ತಾರೆ. ಅದು ಈ ಎರಡು ಜಿಲ್ಲೆಗೆ ಸಲ್ಲುವ ಗೌರವ. ಈ ದೇವಸ್ಥಾನದ ನಗಾರಿ ಗೋಪುರ ನಿರ್ಮಾಣಕ್ಕೆ ಮುಜರಾಯಿ ಇಲಾಖೆಯಿಂದ ನೆರವು ನೀಡ ಲಾಗುವುದು ಎಂದರು.
ಅಧ್ಯಕ್ಷತೆಯನ್ನು ಪೆರ್ಡೂರು ಶ್ರೀಅನಂತ ಪದ್ಮನಾಭ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಮೋದ್ ರೈ ಪಳಜೆ ವಹಿಸಿದ್ದರು. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಾಜಿ ಸಚಿವ ಅಭಯ್‌ಚಂದ್ರ ಜೈನ್, ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್, ಮಾಹೆಯ ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್, ಅದಾನಿ ಗ್ರೂಪ್ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಪೆರ್ಡೂರಿನ ಮಾಜಿ ಮಂಡಲ ಪ್ರಧಾನ ಶಾಂತಾರಾಮ ಸೂಡ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ವಿದ್ವಾನ್ ಸುಬ್ರಹ್ಮಣ್ಯ ಭಟ್ ಗುಂಡಿಬೈಲು, ಪೆರ್ಡೂರು ಶ್ರೀಅನಂತಪದ್ಮನಾಭ ದೇವಸ್ಥಾನದ ಅರ್ಚಕ ರಘುಪ್ರಸಾದ ಅಡಿಗ ಮುಖ್ಯ ಅತಿಥಿಗಳಾಗಿದ್ದರು.
ರಾಜ್‌ಕುಮಾರ್ ದೊಡ್ಡಮನೆ ಸ್ವಾಗತಿಸಿದರು. ಬೆಳಿಗ್ಗೆಯಿಂದ ಕ್ಷೇತ್ರದ ತಂತ್ರಿಗಳಾದ ವಿದ್ವಾನ್ ಕೆ.ಪಿ.ಕುಮಾರಗುರು ತಂತ್ರಿ ಕೊರಂಗ್ರಪಾಡಿ ನೇತೃತ್ವದಲ್ಲಿ ಸರದಿ ಅರ್ಚಕ ಪಿ.ಸುಧಾಕರ ಅಡಿಗರ ಉಪಸ್ಥಿತಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.







