ಶೀರೂರು ಶ್ರೀಗಳ ಪ್ರಥಮ ಪರ್ಯಾಯಕ್ಕೆ ಕಟ್ಟಿಗೆ ಮುಹೂರ್ತ

ಉಡುಪಿ, ಜು.13:ಮುಂದಿನ ವರ್ಷದ ಜನವರಿ ತಿಂಗಳ 18ರಂದು ನಡೆಯುವ ಶ್ರೀಕೃಷ್ಣ ಮಠದ ಪರ್ಯಾಯ ಮಹೋತ್ಸವದಲ್ಲಿ ಪ್ರಥಮ ಬಾರಿಗೆ ಪರ್ಯಾಯ ಪೀಠಾರೋಹಣ ಮಾಡಲಿರುವ ಶೀರೂರು ಮಠದ ಶ್ರೀವೇದವರ್ಧನ ತೀರ್ಥ ಶ್ರೀಪಾದರ ಪರ್ಯಾಯ ಪೂರ್ವಭಾವಿ ಮುಹೂರ್ತಗಳಲ್ಲಿ ಮೂರನೇ ಯದಾದ ಕಟ್ಟಿಗೆ ಮುಹೂರ್ತ ಇಂದು ಶ್ರೀಕೃಷ್ಣ ಮಠದ ಪರಿಸರದಲ್ಲಿ ಸಾಂಪ್ರದಾಯಿಕ ವಿಧಿವಿಧಾನ ಗಳೊಂದಿಗೆ ನಡೆಯಿತು.
ಕಟ್ಟಿಗೆ ಮುಹೂರ್ತದ ಸಂದರ್ಭದಲ್ಲಿ ಭಾವಿ ಪರ್ಯಾಯ ಪೀಠಾಧಿಪತಿ ಗಳೊಂದಿಗೆ ಪ್ರಸ್ತುತ ಪರ್ಯಾಯ ಪುತ್ತಿಗೆ ಮಠದ ಉಭಯ ಶ್ರೀಪಾದರು ಉಪಸ್ಥಿತರಿದ್ದರು. ಪರ್ಯಾಯ ನಡೆಯುವ ಒಂದು ವರ್ಷ ಮೊದಲೇ ಆರಂಭಗೊಳ್ಳುವ ಪೂರ್ವಭಾವಿ ಸಿದ್ಧತೆಗಳಲ್ಲಿ ಕಟ್ಟಿಗೆ ಮುಹೂರ್ತ ಮೂರನೇಯದು. ಇದಕ್ಕೆ ಮೊದಲು ಬಾಳೆ ಮುಹೂರ್ತ ಹಾಗೂ ಅಕ್ಕಿ ಮುಹೂರ್ತಗಳು ನಡೆದಿದ್ದು, ಪರ್ಯಾಯಕ್ಕೆ ಒಂದು ತಿಂಗಳು ಮೊದಲು ಮುಂದಿನ ಡಿಸೆಂಬರ್ ತಿಂಗಳಲ್ಲಿ ಕೊನೆಯದಾದ ಭತ್ತ ಮುಹೂರ್ತ ನಡೆಯಲಿದೆ.
ಪರ್ಯಾಯದ ಎರಡು ವರ್ಷಗಳ ಅವಧಿಯಲ್ಲಿ ನಡೆಯುವ ಅನ್ನ ದಾಸೋಹಕ್ಕಾಗಿ ಬೇಕಾದ ಕಟ್ಟಿಗೆಗಳನ್ನು ಸಂಗ್ರಹಿಸುವುದಕ್ಕಾಗಿ ಕಟ್ಟಿಗೆ ಮುಹೂರ್ತ ನಡೆಯುವ ಸಂಪ್ರದಾಯ ಶತಮಾನಗಳಿಂದ ನಡೆದುಕೊಂಡು ಬಂದಿದೆ.
ಸಂಪ್ರದಾಯದಂತೆ ಇಂದು ಮುಂಜಾನೆ ಶೀರೂರು ಮಠದ ದಿವಾನರಾದ ಡಾ.ಉದಯಕುಮಾರ ಸರಳತ್ತಾಯರ ನೇತೃತ್ವದಲ್ಲಿ ಪುರೋಹಿತರಾದ ಗಿರಿರಾಜ ಉಪಾಧ್ಯಾಯರು ಕಟ್ಟಿಗೆ ಮುಹೂರ್ತದ ವಿಧಿವಿಧಾನಗಳನ್ನು ನೆರವೇರಿಸಿಕೊಟ್ಟರು. ಶೀರೂರು ಮಠ, ಕೃಷ್ಣಮಠ ಸೇರಿದಂತೆ ವಿವಿಧ ಕಡೆಗಳಲ್ಲಿ ದೇವತಾ ಪ್ರಾರ್ಥನೆಯ ಬಳಿಕ ಕಲ್ಸಂಕದ ಲಕ್ಷ್ಮೀ ತೋಟದಿಂದ ಕಟ್ಟಿಗೆಯನ್ನು ಎತ್ತಿನಗಾಡಿ ಹಾಗೂ ಕೈಗಾಡಿಯಲ್ಲಿ ಮತ್ತು ಭಕ್ತರು ಕೈಯಲ್ಲಿ ಹಿಡಿದುಕೊಂಡು ಮೆರವಣಿಗೆಯಲ್ಲಿ ತರಲಾಯಿತು. ನಂತರ ಮಧ್ವಸರೋವರ ಈಶಾನ್ಯ ಭಾಗದ ನಿಗದಿತ ಸ್ಥಳದಲ್ಲಿ ಪೂಜಾದಿಗಳನ್ನು ಸಲ್ಲಿಸಿ ಪ್ರಾರ್ಥನೆಗೈದು ಕಟ್ಟಿಗೆ ರಥ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಶೀರೂರು ಮಠದ ಎರಡು ವರ್ಷಗಳ ಪರ್ಯಾಯಕ್ಕೆ (2026-28) ಬೇಕಾದ ಕಟ್ಟಿಗೆಯನ್ನು ಸಂಗ್ರಹಿಸಿ ಒಂದು ರಥದ ಮಾದರಿಯಲ್ಲಿ ಆಕರ್ಷಕವಾಗಿ ಜೋಡಿಸಿಡಲಾಗುತ್ತದೆ.ಈ ಕಟ್ಟಿಗೆ ರಥದ ಮೇಲ್ಭಾಗದಲ್ಲಿ ಶಿಖರ ಸ್ಥಾಪನೆ ಭತ್ತ ಮುಹೂರ್ತ ದಿನದಂದು ನಡೆಯಲಿದ್ದು, ಅಂದು ಕಟ್ಟಿಗೆ ರಥ ನಿರ್ಮಾಣ ಪೂರ್ಣಗೊಳ್ಳುತ್ತದೆ.
ಈ ಸಂದರ್ಭದಲ್ಲಿ ಉಡುಪಿ ಶಾಸಕ ಯಶಪಾಲ್ ಸುವರ್ಣ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಮಾಜಿ ಶಾಸಕ ರಘುಪತಿ ಭಟ್, ಉಡುಪಿ ನಗರಸಭಾಧ್ಯಕ್ಷ ಪ್ರಭಾಕರ ಪೂಜಾರಿ, ಮಟ್ಟಾರು ರತ್ನಾಕರ ಹೆಗ್ಡೆ, ಮಠದ ಪಾರುಪತ್ಯಗಾರರಾದ ಶ್ರೀಶ ಭಟ್ ಕಡೆಕಾರ್, ಜಯಕರ ಶೆಟ್ಟಿ ಇಂದ್ರಾಳಿ, ಪ್ರಸಾದ್‌ರಾಜ್ ಕಾಂಚನ್, ರಮೇಶ್ ಕಾಂಚನ್, ಎಂ.ಬಿ.ಪುರಾಣಿಕ್, ಮೊದಲಾದವರು ಉಪಸ್ಥಿತರಿದ್ದರು.







