ಬ್ರಹ್ಮಾವರ ಕೃಷಿ ಕೇಂದ್ರ, ಡಿಪ್ಲೋಮ ಕಾಲೇಜಿಗೆ ಉಡುಪಿ ಡಿಸಿ ಭೇಟಿ

ಬ್ರಹ್ಮಾವರ: ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ಇಂದು ಬ್ರಹ್ಮಾವರದಲ್ಲಿರುವ ವಲಯ ಕೃ,ಇ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿ, ಹಣ ಸಂದಾಯವಾಗಲು ಬಾಕಿ ಉಳಿದಿದ್ದ ಎಂಟು ಮಂದಿ ರೈತರಿಗೆ ಬೀಜೋತ್ಪಾದನೆ ಮಾಡಿದ ಹಣವನ್ನು ಬಿಡುಗಡೆ ಮಾಡಲು ವ್ಯವಸ್ಥೆ ಮಾಡಿದರು.
ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಬೀಜೋತ್ಪಾದನೆ ಮಾಡಿದ ರೈತರಿಗೆ ಹಣ ಸಂದಾಯವಾಗದ ಬಗ್ಗೆ ಚರ್ಚೆ ನಡೆದಿದ್ದು, ಎಲ್ಲರಿಗೂ ತಕ್ಷಣ ಹಣ ಬಿಡುಗಡೆ ಮಾಡುವಂತೆ ಉಸ್ತುವಾರಿ ಸಚಿವರು ಸೂಚಿಸಿದ್ದರು. ಅದರಂತೆ 31 ರೈತರ ಪೈಕಿ 23 ಮಂದಿ ರೈತರಿಗೆ ಹಣ ಸಂದಾಯವಾಗಿದ್ದು, ಉಳಿದ 08 ಮಂದಿ ರೈತರಿಗೆ ಪೂರ್ತಿ ಹಣ ಸಂದಾಯವಾಗಿರಲಿಲ್ಲ.
ಈ ರೈತರು ಉಸ್ತುವಾರಿ ಸಚಿವರಿಗೆ ದೂರಿಕೊಂಡ ಹಿನ್ನೆಲೆಯಲ್ಲಿ ಕೂಡಲೇ ಉಳಿದ ಹಣ ಬಿಡುಗಡೆ ಗೊಳಿಸುವಂತೆ ಸಚಿವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಕೃಷಿ ಕೇಂದ್ರಕ್ಕೆ ಭೇಟಿ ನೀಡಿ ಬಾಕಿ ಹಣದ ಬಿಡುಗಡೆಗೆ ಮಾರ್ಗದರ್ಶನ ನೀಡಿದರು.
ಆ ಬಳಿಕ ಜಿಲ್ಲಾಧಿಕಾರಿಗಳು ಕೇಂದ್ರದಲ್ಲಿರುವ ಭತ್ತದ ಸಸಿಮಡಿಗಳ ತಾಕನ್ನು ವೀಕ್ಷಣೆ ಮಾಡಿ, ಸಂಶೋಧನಾ ಕೇಂದ್ರದಿಂದ ರೈತರಿಗೆ ದೊರೆಯುತ್ತಿರುವ ತರಬೇತಿ ಹಾಗೂ ಭತ್ತದ ಬೇಸಾಯಕ್ಕೆ ಬೇಕಾಗುವ ಬಿತ್ತನೆ ಬೀಜ, ಯಾಂತ್ರೀಕೃತ ಸೇವೆಗಳು ಮತ್ತು ಇತರೆ ಸಂಶೋಧನಾ ಚಟುವಟಿಕೆಗಳ ಬಗ್ಗೆ ಮಾಹಿತಿಗಳನ್ನು ಕೇಳಿ ಪಡೆದರು.
ಅಲ್ಲದೇ ಸ್ವರೂಪ ಟಿ.ಕೆ. ಅವರು ಅಲ್ಲೇ ಪಕ್ಕದ ಬ್ರಹ್ಮಾವರ ಕೃಷಿ ಡಿಪ್ಲೋಮಾ ಮಹಾವಿದ್ಯಾಲಯಕ್ಕೆ ಭೇಟಿ ನೀಡಿ, ಕಾಲೇಜಿನ ತರಬೇತಿ ಕೊಠಡಿ, ಪ್ರಯೋಗಾಲಯ, ಗ್ರಂಥಾಲಯ, ಕಛೇರಿ ಹಾಗೂ ಇತರ ವಿಭಾಗ ಗಳನ್ನು ವೀಕ್ಷಿಸಿದರು. ಪ್ರಥಮ ಶೈಕ್ಷಣಿಕ ಸಾಲಿನ ಪ್ರಥಮ ವರ್ಷದ ಪ್ರವೇಶಾತಿಗೆ ಬಂದಿರುವ ಡಿಪ್ಲೋಮಾ ಕೃಷಿ ವಿದ್ಯಾರ್ಥಿಗಳು ಮತ್ತು ಪೋಷಕರ ಜೊತೆ ಅವರು ಸಂವಾದ ನಡೆಸಿದರು.







