ಕಾರ್ಕಳ: ಕಂಚಿನ ಪ್ರತಿಮೆ ಹೆಸರಿನಲ್ಲಿ ನಂಬಿಕೆ ದ್ರೋಹ, ಧರ್ಮ, ರಾಜದ್ರೋಹ
ಶಾಸಕ ಸುನಿಲ್‌ರಿಂದ ಜನರ ಕ್ಷಮೆ ಯಾಚನೆ, ರಾಜೀನಾಮೆಗೆ ಕಾಂಗ್ರೆಸ್ ಆಗ್ರಹ

ಉಡುಪಿ, ಜು.16: ಕಾರ್ಕಳ ತಾಲೂಕು ಬೈಲೂರಿನ ಉಮ್ಮಿಕಲ್ ಬೆಟ್ಟದ ಪರಶುರಾಮ್ ಥೀಮ್ ಪಾರ್ಕ್ ನಲ್ಲಿ ಕಂಚಿನ ಪತ್ರಿಮೆಯ ಹೆಸರಿನಲ್ಲಿ ನಕಲಿ ಪರಶುರಾಮ ಮೂರ್ತಿ ನಿರ್ಮಿಸಿ ಕ್ಷೇತ್ರದ ಜನತೆಗೆ ವಂಚಿಸಿ, ನಂಬಿಕೆ ದ್ರೋಹ, ಧರ್ಮ ದ್ರೋಹ ಹಾಗೂ ರಾಜ ದ್ರೋಹ ಎಸಗಿದ ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರು ಜನರ ಕ್ಷಮೆ ಯಾಚಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಆಗ್ರಹಿಸಿದೆ.
ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್, ಉಮ್ಮಿಕಲ್ ಬೆಟ್ಟದಲ್ಲಿ ನಿಲ್ಲಿಸಿರುವುದು ಪರಶುರಾಮನ ಕಂಚಿನ ಪ್ರತಿಮೆ ಅಲ್ಲ ಎಂಬುದು ಪೊಲೀಸರು ಹಗರಣದ ತನಿಖೆ ನಡೆಸಿ ಕಾರ್ಕಳ ನ್ಯಾಯಾಲಯಕ್ಕೆ ಸಲ್ಲಿಸಿದ 1231 ಪುಟಗಳ ದೋಷಾರೋಪಣೆ ವರದಿಯಿಂದ ಸ್ಪಷ್ಟವಾಗಿ ಸಾಬೀತಾಗಿದೆ ಎಂದವರು ಹೇಳಿದರು.
ಪರಶುರಾಮನ ಕಂಚಿನ ಪ್ರತಿಮೆಗಾಗಿ 1,83,00,000 ರೂ. ಪಡೆದು ಶಿಲ್ಪಿ ಕೃಷ್ಣ ನಾಯಕ್ ಕಂಚಿನ ಲೋಹದಿಂದ ಮೂರ್ತಿ ನಿರ್ಮಿಸದೆ ಹಿತ್ತಾಳೆ ಲೋಹದಿಂದ ಮಾಡಿರುವುದಾಗಿ ತಜ್ಞರ ಪರಿಶೀಲನಾ ವರದಿ ಹೇಳಿದೆ. ಅಲ್ಲದೇ ಪ್ರತಿಮೆ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್, ಇಂಜಿನಿಯರ್ ಸಚಿನ್ ವೈ.ಕುಮಾರ್ ವರ್ಕ್ ಆರ್ಡರ್‌ನ ಷರತ್ತುಗಳನ್ನು ಪಾಲಿಸದೇ, ಪರಶುರಾಮ ಪ್ರತಿಮೆಯ ಸೊಂಟದ ಮೇಲಿನ ಭಾಗವನ್ನು ಅಲೆವೂರಿನ ಪ್ರಗತಿನಗರದಲ್ಲಿ ಅಡಗಿಸಿಟ್ಟು ತಪ್ಪು ಮಾಹಿತಿ ನೀಡಿರುವುದು ವರದಿಯಿಂದ ಸ್ಪಷ್ಟವಾಗಿದೆ.
ಇದರೊಂದಿಗೆ ಆರೋಪಿಗಳಾದ ಶಿಲ್ಪಿ ಕೃಷ್ಣ ನಾಯಕ್, ಅರುಣ್‌ಕುಮಾರ್ ಹಾಗೂ ಸಚಿನ್ ಇವರು ಅಪರಾಧಿ ಒಳಸಂಚು, ನಂಬಿಕೆ ದ್ರೋಹ ಹಾಗೂ ವಂಚನೆ ಎಸಗಿ ಸಾಕ್ಷ್ಯನಾಶ ಮಾಡಿದ್ದು ಇವರ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿದೆ ಎಂದು ಶುಭದ ರಾವ್ ತಿಳಿಸಿದ್ದಾರೆ.
ಚುನಾವಣೆ ಗೆಲ್ಲಲು ಪೂರ್ವಯೋಜಿತ ವಂಚನೆ: ಈ ಅಂಶವನ್ನು ನೋಡಿದಾಗ ಕಾರ್ಕಳ ಶಾಸಕ ಸುನಿಲ್ ಕುಮಾರ್, 2023ರ ವಿಧಾನಸಭಾ ಚುನಾವಣೆ ಗೆಲ್ಲಲು ನಡೆಸಿದ ವ್ಯವಸ್ಥಿತ ಪೂರ್ವಯೋಜಿತ ವಂಚನೆ, ಪರಶುರಾಮ ಕಂಚಿನ ಪ್ರತಿಮೆ ನಿರ್ಮಾಣ ಮಾಡಿದ್ದಾಗಿ ನಿರಂತರವಾಗಿ ಸುಳ್ಳು ಹೇಳಿ ಜನತೆಗೆ ಎಸಗಿದ ಧಾರ್ಮಿಕ, ನಂಬಿಕೆ ದ್ರೋಹ ಮಾತ್ರವಲ್ಲ, ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಚಿವ ಸಂಪುಟದ ಸದಸ್ಯರನ್ನು ಕರೆಸಿ ನಕಲಿ ಪ್ರತಿಮೆಯ ಉದ್ಘಾಟನೆ ಮಾಡಿ ತನ್ನ ಸರಕಾರಕ್ಕೆ ದ್ರೋಹ ಎಸಗಿದ ‘ರಾಜ ದ್ರೋಹ’ ಪ್ರಕರಣವೂ ಇದಾಗಿದೆ ಎಂದರು.
ಎರಡು ಪ್ರತಿಮೆ: ತಾವು ಸುಳ್ಳು ಹೇಳಿ ಜನರನ್ನು ವಂಚಿಸಿದ್ದರೂ, ಪೈಬರ್ ಪ್ರತಿಮೆ ಎಂಬ ಕಾಂಗ್ರೆಸ್ ಹೇಳಿಕೆಯನ್ನು ಹಿಡಿದು ತನ್ನನ್ನು ಸಮರ್ಥಿಸಿಕೊಳ್ಳು ತ್ತಿರುವ ಸುನಿಲ್ ಕುಮಾರ್ ವಾದವನ್ನು ತಳ್ಳಿ ಹಾಕಿದ ಶುಭದ ರಾವ್, ಎರಡು ವರ್ಷದುದ್ದಕ್ಕೂ ಕಂಚಿನ ಪ್ರತಿಮೆ ನಿರ್ಮಿಸಿದ್ದಾಗಿ ಹೇಳಿಕೊಂಡು ಬಂದ ಶಾಸಕರ ಮಾತು ಸಂಪೂರ್ಣ ಸುಳ್ಳು ಎಂದು ಸಾಬೀತಾಗಿದೆ. ಆದರೆ ಬೆಟ್ಟದ ಮೇಲೆ ಈಗ ಇರುವುದು ಫೈಬರ್ ಪ್ರತಿಮೆ ಎಂಬುದನ್ನು ನಾವು ಈಗಲೂ ಸಾಬೀತು ಪಡಿಸಲು ಸಿದ್ಧರಿದ್ದು, ಮಾತಿಗೆ ಬದ್ಧರಾಗಿರುವುದಾಗಿ ಹೇಳಿದರು.
ಬೆಟ್ಟದ ಮೇಲಿರುವ ಪ್ರತಿಮೆಯ ಸೊಂಟದ ಕೆಳಗಿನ ಭಾಗ ಪೈಬರ್ ಲೇಪಿತ ಎಂಬುದನ್ನು ಯಾರು ಬೇಕಿದ್ದರೂ ಹೋಗಿ ನೋಡಬಹುದು. ಪರೀಕ್ಷಿ ಸಬಹುದು. ಆದರೆ ಮೂರ್ತಿ ಕಂಚಿನದ್ದು ಎಂದು ಸುನಿಲ್‌ಕುಮಾರ್ ತಮ್ಮ ಮಾತನ್ನು ಸಾಬೀತು ಪಡಿಸಬಲ್ಲರೇ ಎಂದವರು ಸವಾಲು ಹಾಕಿದರು.
ಶಿಲ್ಪಿ ಕೃಷ್ಣ ನಾಯಕ್‌ರ ಬೆಂಗಳೂರಿನ ಗೋಡಾನಿನಿಂದ ಪೊಲೀಸರು ವಶಕ್ಕೆ ಪಡೆದ ಪ್ರತಿಮೆಯ ಭಾಗ ಹಿತಾಳೆಯದಾಗಿದ್ದು ಎಫ್‌ಎಸ್‌ಐಎಲ್ ತನಿಖೆ ಯಿಂದ ಸಾಬೀತಾಗಿದೆ. ಇದರಲ್ಲಿ ಪ್ರತಿಮೆಯ ಮುಖ, ಎದೆ, ಎರಡು ಕಾಲು ಗಳು ಹಾಗೂ ಪಾದದ ಭಾಗಗಳು ಬೇರೆ ಬೇರೆಯಾಗಿ ಇವೆ. ಹಾಗಿದ್ದರೆ ಬೆಟ್ಟದ ಮೇಲಿರುವ ಭಾಗ ಯಾವುದು? ಎಂದು ಪ್ರಶ್ನಿಸಿದ ಅವರು ಪರಶುರಾಮರ ಎರಡೆರಡು ಮೂರ್ತಿಯನ್ನು ನಿರ್ಮಿಸಿರುವುದು ಇದರಿಂದ ಸ್ಪಷ್ಟವಾಗುತ್ತದೆ. ಎರಡು ಮೂರ್ತಿಗಳನ್ನು ಯಾಕೆ ನಿರ್ಮಿಸಲಾಯಿತು ಎಂಬುದಕ್ಕೆ ಶಾಸಕರೇ ಉತ್ತರಿಸಬೇಕಾಗುತ್ತದೆ ಎಂದರು.
ಉದ್ಘಾಟನೆಗೆ ಪ್ರತಿಮೆ ಸಿದ್ಧವಾಗದೇ ಇದ್ದಾಗ ಪೈಬರ್ ಲೇಪಿತ ಇನ್ನೊಂದು ಪ್ರತಿಮೆ ಮಾಡಿ ಇದೇ ಕಂಚಿನ ಪ್ರತಿಮೆ ಎಂದು ಮುಖ್ಯಮಂತ್ರಿಗಳನ್ನು, ಸಚಿವರನ್ನು ಹಾಗೂ ಜನರನ್ನು ನಂಬಿಸಲು ಪ್ರಯತ್ನಿಸ ಲಾಯಿತು. ತಾನು ಲೋಹ ತಜ್ಞನಲ್ಲ ಎಂದು ಈಗ ಹೇಳುವ ಸುನಿಲ್, ಹಾಗಿದ್ದರೆ ಬೆಟ್ಟದ ಮೇಲಿನ ಪ್ರತಿಮೆ ಕಂಚಿನದ್ದು ಎಂದು ಸುಳ್ಳು ಹೇಳುವಾಗ ಲೋಹತಜ್ಞರಾಗಿದ್ದರೇ ಎಂದು ಪ್ರಶ್ನಿಸಿದ್ದಾರೆ.
ಶಾಸಕರ ತಪ್ಪಿಗಾಗಿ ಅಧಿಕಾರಿಗಳಿಗೆ ಶಿಕ್ಷೆಯಾಗಿದೆ. ಸುನಿಲ್ ಎಸಗಿರುವ ಈ ಕೃತ್ಯದಿಂದ ಈಗ ಸರಕಾರಿ ಅಧಿಕಾರಿಗಳ ಮೇಲೆ ಆರೋಪ ಪಟ್ಟಿ ದಾಖಲಾಗಿದೆ. ಅವರು ನ್ಯಾಯಾಲಯದಿಂದ ಶಿಕ್ಷೆ ಅನುಭವಿಸು ವಂತಾಗಿದೆ. ಶಾಸಕರ ರಾಜಕೀಯ ಆಟಕ್ಕೆ ಅಧಿಕಾರಿಗಳು ಬಲಿಯಾಗಿದ್ದಾರೆ ಎಂದು ಶುಭದ ರಾವ್ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಕಳ ಪುರಸಭೆಯ ಮಾಜಿ ಅಧ್ಯಕ್ಷ ಸುಭಿತ್ ಕುಮಾರ್, ಕಾರ್ಕಳ ಪುರಸಭೆಯ ಸದಸ್ಯ ವಿವೇಕಾನಂದ ಶೆಣೈ, ಕಾರ್ಕಳ ಯುವ ಕಾಂಗ್ರೆಸ್ ಅಧ್ಯಕ್ಷ ಸೂರಜ್ ಶೆಟ್ಟಿ ನಕ್ರೆ, ಕಾರ್ಯದರ್ಶಿ ಮಂಜುನಾಥ ಜೋಗಿ ಹಾಗೂ ವಕ್ತಾರ ಪ್ರದೀಪ್ ಬೇಲಾಡಿ ಉಪಸ್ಥಿತರಿದ್ದರು.







