ಉಡುಪಿ ಜಿಲ್ಲೆಯಲ್ಲಿ ಮಳೆ: ಕಾಪು ಬಿಟ್ಟರೆ ಉಳಿದೆಡೆ ನಿರಾಳ

ಉಡುಪಿ, ಜು.17: ಗುರುವಾರ ಅಪರಾಹ್ನದವರೆಗೆ ಸತತ ಮಳೆಯಾದರೂ ಕಾಪು ತಾಲೂಕನ್ನು ಹೊರತು ಪಡಿಸಿ ಉಡುಪಿ ಜಿಲ್ಲೆಯ ಉಳಿದೆಡೆಗಳಲ್ಲಿ ಹೆಚ್ಚಿನ ಹಾನಿ ಏನೂ ಸಂಭವಿಸಿಲ್ಲ. ಜಿಲ್ಲೆಯಲ್ಲಿ 9.4ಸೆ.ಮಿ. ನಷ್ಟು ಮಳೆ ದಾಖಲಾಗಿದ್ದು ಮೂರು ಮನೆಗಳಿಗೆ ಹಾನಿಯಾದ ವರದಿ ಜಿಲ್ಲಾಧಿಕಾರಿ ಕಚೇರಿಗೆ ಬಂದಿದೆ.
ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಕಾಪು ತಾಲೂಕಿನಲ್ಲಿ ಅತ್ಯಧಿಕ ಅಂದರೆ 17.3ಸೆ.ಮೀ. ಮಳೆಯಾಗಿದೆ. ಉಳಿದಂತೆ ಉಡುಪಿಯಲ್ಲಿ 11.6ಸೆ.ಮೀ., ಬ್ರಹ್ಮಾವರದಲ್ಲಿ 11ಸೆ.ಮೀ. ಕಾರ್ಕಳದಲ್ಲಿ 8.8, ಹೆಬ್ರಿಯಲ್ಲಿ 8.5, ಕುಂದಾಪುದಲ್ಲಿ 8 ಹಾಗೂ ಬೈಂದೂರಿನಲ್ಲಿ 7.7ಸೆ.ಮೀ.ನಷ್ಟು ಮಳೆ ಬಿದ್ದಿದೆ.
ಇಂದು ಬೆಳಗಿನಿಂದ ಅಪರಾಹ್ನದವರೆಗೆ ನಿರಂತರವಾಗಿ ಮಳೆಯಾಗು ತಿದ್ದರೂ, ಅನಂತರ ಮಳೆ ಕಡಿಮೆಯಾಯಿತು. ಇದರಿಂದ ಅಪಾಯದ ಸ್ಥಿತಿಗೆ ತಲುಪಿದ್ದ ಕಾಪು ತಾಲೂಕಿನ ಅನೇಕ ಗ್ರಾಮಗಳಲ್ಲಿ ನೆರೆ ಪರಿಸ್ಥಿತಿ ಇಳಿದು ನಿರಾಳವಾಯಿತು. ಹೆಜಮಾಡಿ, ಮಲ್ಲಾರು, ಪಾದೆಬೆಟ್ಟು ಮುಂತಾದ ಕಡೆಗಳಲ್ಲಿ ಜನ ಮನೆ ತೊರೆದು ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆದರು.
ಕಾರ್ಕಳ ತಾಲೂಕು ಪಳ್ಳಿ ಗ್ರಾಮದ ಕಿಟ್ಟು ಪಾಣ ಅವರ ಮನೆ ಮಳೆಯಿಂದ ಭಾಗಶ: ಹಾನಿಗೊಂಡಿದ್ದು ಒಂದು ಲಕ್ಷ ರೂ.ಗಳಿಗೂ ಅಧಿಕ ನಷ್ಟ ಸಂಭವಿಸಿದೆ. ಕುಂದಾಪುರ ತಾಲೂಕು ಮೊಳಹಳ್ಳಿಯ ಗುಲಾಬಿ ಶೆಡ್ತಿ ಹಾಗೂ ಕಾರ್ಕಳ ತಾಲೂಕು ಬೋಳ ಗ್ರಾಮದ ಪ್ರಸಾದ್ ಶೆಟ್ಟಿ ಅವರ ಮನೆ ಮೇಲೆ ಮರ ಬಿದ್ದು ಅಪಾರ ನಷ್ಟ ಸಂಭವಿಸಿದ ವರದಿ ಬಂದಿದೆ.







