ಕಾರ್ಕಳ ಪುರಸಭೆ, ತಾಲೂಕು ಕಚೇರಿ ಕಚೇರಿಗಳಿಗೆ ಲೋಕಾಯುಕ್ತ ಭೇಟಿ
ಕಡತ, ದಾಖಲೆಗಳ ಪರಿಶೀಲನೆ: ಅರ್ಜಿ ಬಾಕಿ, ಕರ್ತವ್ಯ ವಿಳಂಬ ಪತ್ತೆ

ಕಾರ್ಕಳ, ಜು.18: ಕಾರ್ಕಳ ಪುರಸಭೆ ಹಾಗೂ ತಾಲೂಕು ಕಚೇರಿಗಳಿಗೆ ಶುಕ್ರವಾರ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ಭೇಟಿ ನೀಡಿ, ಕಡತಗಳ ಪರಿಶೀಲನೆ ನಡೆಸಿದರು.
ಪುರಸಭೆಯಲ್ಲಿ ಸಾರ್ವಜನಿಕರಿಗೆ ಸೇವೆ ನೀಡುವಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿಬಂದಿದ್ದು, ಈ ದೂರುಗಳ ಆಧಾರದ ಮೇಲೆ ಉಡುಪಿ ಪ್ರಭಾರ ಡಿವೈಎಸ್ಪಿ ಮಂಜು ನಾಥ್ ನೇತೃತ್ವದಲ್ಲಿ ಪುರಸಭೆ ಕಚೇರಿಯ ಎಲ್ಲ ವಿಭಾಗಗಳ ಕಡತಗಳನ್ನು ಕೂಲಂಕಷ ಪರಿಶೀಲನೆ ನಡೆಸಲಾಯಿತು. ಈ ವೇಳೆ ವಿವಿಧ ಬಿಲ್, ಖಾತೆ ತಿದ್ದುಪಡಿ, ಖಾತಾ ವರ್ಗಾವಣೆ, ಜನನ-ಮರಣ ಪ್ರಮಾಣಪತ್ರ, ಉದ್ದಿಮೆ ಪರವಾನಗಿ ಹಾಗೂ ಇತರೆ ಅರ್ಜಿಗಳ ವಿಲೇವಾರಿ ವಿಳಂಬ ಆಗಿರುವುದು ಕಂಡುಬಂದಿದೆ.
ಪುರಸಭೆ ಕಚೇರಿ ಮಾತ್ರವಲ್ಲದೆ, ತಾಲೂಕು ಕಚೇರಿಯ ರೆಕಾರ್ಡ್ ರೂಂಗಳಿಗೂ ಲೋಕಾಯುಕ್ತ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಈ ವೇಳೆ, ಕಳೆದ 10 ತಿಂಗಳಿಂದ ಬಾಕಿ ಉಳಿದಿದ್ದ ಪ್ರಮುಖ ಕಡತ ಪತ್ತೆಯಾಗಿದೆ. ಕಡತ ವಿಳಂಬಕ್ಕೆ ಸಿಬಂದಿಯಿಂದ ಕಾರಣ ಕೇಳಿದ್ದು. ಸಾರ್ವಜನಿಕರ ಕೆಲಸ ಕಾರ್ಯಗಳು ತ್ವರಿತವಾಗಿ ಮತ್ತು ಪಾರದರ್ಶಕವಾಗಿ ನಡೆಯಬೇಕು ಎಂದು ಲೋಕಾಯುಕ್ತ ಅಧಿಕಾರಿಗಳು ತಾಕೀತು ಮಾಡಿದರು. ಈ ದಿಢೀರ್ ಭೇಟಿ ಪುರಸಭೆ ಹಾಗೂ ತಾಲೂಕು ಕಚೇರಿ ವಲಯದಲ್ಲಿ ಸಂಚಲನ ಮೂಡಿಸಿದೆ.
ಈ ದಿಢೀರ್ ಬಗ್ಗೆ ರಾಜ್ಯ ಲೋಕಾಯುಕ್ತ ಕಚೇರಿಗೆ ವರದಿ ಮಾಡ ಲಾಗುತ್ತದೆ. ಸಿಬ್ಬಂದಿಗಳ ಕರ್ತವ್ಯ ವಿಳಂಬ, ಕಚೇರಿಯಲ್ಲಿನ ನೂನ್ಯತೆ ಬಗ್ಗೆ ವರದಿ ಸಲ್ಲಿಸಲಾಗುವುದು. ಈ ಕುರಿತು ಲೋಕಾಯುಕ್ತದಿಂದ ಸಂಬಂಧಪಟ್ಟ ಸಿಬ್ಬಂದಿಗಳಿಗೆ ನೋಟೀಸ್ ಜಾರಿ ಮಾಡಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪ್ರಭಾರ ಡಿವೈಎಸ್ಪಿ ಮಂಜುನಾಥ್ ತಿಳಿಸಿದ್ದಾರೆ.







