ಸೊಳ್ಳೆಗಳ ಉತ್ಪತ್ತಿ ಕಾರ್ಖಾನೆಯಾಗಿರುವ ಉಡುಪಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ!

ಉಡುಪಿ: ನಗರದ ಕವಿ ಮುದಣ್ಣ ಮಾರ್ಗದ ನಗರಸಭೆ ಕಛೇರಿ ಬಳಿಯಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಕಂಪೌಂಡ್ ಒಳಾಂಗಣದ ಸುತ್ತಲು ಗಿಡ ಗಂಟಿಗಳು ಬೆಳೆದು ನಿಂತಿದ್ದು, ಆಸ್ಪತ್ರೆಯ ಪರಿಸರವು ರೋಗವಾಹಕ ಸೊಳ್ಳೆಗಳ ಉತ್ಪತ್ತಿಯ ಕಾರ್ಖಾನೆಯಾಗಿ ಮಾರ್ಪಟ್ಟಿದೆ. ಜಿಲ್ಲಾ ಆರೋಗ್ಯ ಇಲಾಖೆ, ನಗರಾಡಳಿತ ತಕ್ಷಣ ಗಿಡಗಂಟಿಗಳನ್ನು ಕಟಾವುಗೊಳಿಸಬೇಕೆಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು ಹಾಗೂ ತಾರಾನಾಥ್ ಮೇಸ್ತ ಶಿರೂರು ಆಗ್ರಹಪಡಿಸಿದ್ದಾರೆ.
ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಪರಿಸರದಲ್ಲಿ ಗಿಡ ಗಂಟಿಗಳು ಬೆಳೆದು ನಿಂತಿರುವುದರಿಂದ ಉರಗಾದಿ, ವಿಷ ಜಂತುಗಳು ನೆಲೆ ಪಡೆಯಲು ಯೋಗ್ಯ ಸ್ಥಳವಾದಂತಾಗಿದೆ. ಪರಿಸರ ಶುಚಿತ್ವದ ಸಂದೇಶ ಸಾರಬೇಕಾದ ಆಸ್ಪತ್ರೆಯ ಮಡಿಲಿನಲ್ಲಿ ಅಶುಚಿತ್ವದ ವಾತಾವರಣ ಸೃಷ್ಟಿಯಾಗಿರುವುದು ವಿಪರ್ಯಾಸದ ಸಂಗತಿ ಎನಿಸಿಕೊಂಡಿದೆ.
ಡೆಂಗ್ಯೂ, ಮಲೇರಿಯ ಜ್ವರ ಬಾಧಿಸುವ ಭೀತಿಯು ಎದುರಾಗಿದೆ. ಪ್ರತಿ ವರ್ಷದ ಮಳೆಗಾಲದಲ್ಲೂ ಆಸ್ಪತ್ರೆಯ ಸುತ್ತಲು ಗಿಡಗಂಟಿಗಳು ಬೆಳೆದು ಸಮಸ್ಯೆ ಉದ್ಭವಿಸುವುದು ಕಂಡುಬರುತ್ತದೆ. ಹಾಗಾಗಿ ನೆಲವನ್ನು ಸಮತಟ್ಟು ಗೊಳಿಸಿ ನೆಲಹಾಸು ಅಳವಡಿಸುವುದರಿಂದ, ಸಮಸ್ಯೆಯಿಂದ ಶಾಶ್ವತ ಮುಕ್ತಿ ಪಡೆಯಲು ಸೂಕ್ತ ಪರಿಹಾರವಾಗಿದ್ದು, ಆರೋಗ್ಯ ಇಲಾಖೆ ಗಮನಿಸಬೇಕಾಗಿದೆ ಎಂದು ಸಾಮಾಜಿಕ ಕಾರ್ಯರ್ಕರ್ತರು ತಿಳಿಸಿದ್ದಾರೆ.





