ಗಲಭೆಕೋರರ ಮೂಲಕ ಗೊಂದಲ ಸೃಷ್ಠಿಸಿ ಆರ್‌ಸಿಬಿ ವಿಜಯೋತ್ಸವದಲ್ಲಿ ಕಾಲ್ತುಳಿತ: ಅನುಪಮಾ ಶೆಣೈ ಆರೋಪ
ಉಡುಪಿ, ಜು. 19: ಐಪಿಎಸ್ ಅಧಿಕಾರಿ ದಯಾನಂದ್ ಮುಂದಿನ ಡಿಜಿಪಿ ಮತ್ತು ಐಜಿಪಿಯಾಗಿ ನೇಮಕ ಆಗುವುದನ್ನು ತಡೆಯುವ ಉದ್ದೇಶದಿಂದ ಸ್ಮಗ್ಲಿಂಗ್ ಮಾಫಿಯಾವೊಂದು ಗಲಭೆಕೋರರ ಮೂಲಕ ಗೊಂದಲ ಸೃಷ್ಠಿಸಿ ಆರ್‌ಸಿಬಿ ವಿಜಯೋತ್ಸವದಲ್ಲಿ ಕಾಲ್ತುಳಿತಕ್ಕೆ ಕಾರಣವಾಗಿದೆ ಎಂದು ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಆರೋಪಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಂಬಂಧ ಐವರು ಪೊಲೀಸ್ ಅಧಿಕಾರಿಗಳ ಅಮಾನತು ಕುರಿತು ಮ್ಯಾಜಿಸ್ಟ್ರಿಯಲ್ ತನಿಖೆ ನಡೆಸುತ್ತಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ಅವರಿಗೆ ಆರ್‌ಸಿಬಿ ಕಾಲ್ತುಳಿತಕ್ಕೆ ಕಾರಣವಾದ ಅಂಶಗಳ ಬಗ್ಗೆ ನಾನು ಎಂಟು ಪುಟಗಳ ಪತ್ರ ಬರೆದಿದ್ದೇನೆ. ಈ ಎಲ್ಲ ವಿಚಾರವನ್ನು ಆತ್ರದಲ್ಲಿ ತಿಳಿಸಿದ್ದೇನೆ. ಅದರ ಬಗ್ಗೆಯೂ ಅವರು ತನಿಖೆಯಾಗಬೇಕು ಎಂದರು.
ಪ್ರಕರಣ ಸಂಬಂಧಿಸಿದಂತೆ ಕರ್ನಾಟಕದ ಉಚ್ಚ ನ್ಯಾಯಾಲಯಕ್ಕೆ ಸರ್ಕಾರ ಸಲ್ಲಿಸಿರುವ ವರದಿಯನ್ನು ಸಲ್ಲಿಸಿದ್ದು, ಈ ವರದಿಯು ಕ್ರಿಕೆಟಿಗ ವಿರಾಟ್ ಕೊಹ್ಲಿಯನ್ನು ಆರೋಪಿಯನ್ನಾಗಿ ಮಾಡಿದೆ. ವಿರಾಟ್ ಕೊಹ್ಲಿಯನ್ನು ಕಾಲ್ತುಳಿತದಲ್ಲಿ ಆರೋಪಿಯನ್ನಾಗಿ ಮಾಡುವ ಸರಕಾರದ ಈ ವರದಿಯನ್ನು ನಾನು ವಿರೋಧಿಸುತ್ತೇನೆ ಎಂದು ಅವರು ಹೇಳಿದರು.
ಈ ವರದಿಯ ಪ್ರಕಾರ, ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ವೀಡಿಯೊವನ್ನು ನೋಡಿದ 16 ಲಕ್ಷಕ್ಕೂ ಹೆಚ್ಚು ಜನರು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಬಂದ ಕಾರಣ ಕಾಲ್ತುಳಿತ ಸಂಭವಿಸಿದೆ. ಆರ್‌ಸಿಬಿ ಸಾಮಾಜಿಕ ಮಾಧ್ಯಮದಲ್ಲಿ ಮೊದಲ ಟ್ವೀಟ್‌ಗೆ 16 ಲಕ್ಷ ವೀಕ್ಷಣೆ ಗಳು, ಎರಡನೇ ಟ್ವೀಟ್‌ಗೆ 7.6ಲಕ್ಷ ವೀಕ್ಷಣೆಗಳು ಮತ್ತು ಮೂರನೇ ಟ್ವೀಟ್ಗೆ 17 ಲಕ್ಷ ವೀಕ್ಷಣೆಗಳು ಬಂದಿವೆ ಎಂದು ವರದಿ ಹೇಳುತ್ತದೆ ಎಂದು ಅವರು ತಿಳಿಸಿದರು.
ಪ್ರಪಂಚದಾದ್ಯಂತ ಲಕ್ಷಾಂತರ ಜನರು ಸಾಮಾಜಿಕ ಮಾಧ್ಯಮದಲ್ಲಿ ಸಂದೇಶಗಳನ್ನು ವೀಕ್ಷಿಸುತ್ತಾರೆ. ಪೋಸ್ಟ್ ನೋಡಿದ ಪ್ರತಿಯೊಬ್ಬರೂ ಅದೇ ದಿನ ವಿಮಾನ ಹತ್ತಿ ಈ ಕಾರ್ಯಕ್ರಮಕ್ಕೆ ಹಾಜರಾದರೇ? ಸಾಮಾಜಿಕ ಮಾಧ್ಯಮ ವೇದಿಕೆಗಳಿಂದ ಮಾಹಿತಿ ಸಂಗ್ರಹಿಸಿ, ಅದನ್ನು ವೀಕ್ಷಿಸಿದ ಎಲ್ಲ ಜನರ ಉಪಸ್ಥಿತಿಯನ್ನು ಸಿದ್ದರಾಮಯ್ಯ ಅವರು ಪರಿಶೀಲಿಸಿದ್ದಾರೆಯೇ? ಎಂದು ಅವರು ಪ್ರಶ್ನಿಸಿದರು.
ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯನ್ನು ತಕ್ಷಣವೇ ಹಿಂಪಡೆಯುವಂತೆ ಮತ್ತು ವಿರಾಟ್ ಕೊಹ್ಲಿ ಹಾಗೂ ಆರ್‌ಸಿಬಿ ಅಭಿಮಾನಿಗಳಿಗೆ ಕ್ಷಮೆಯಾಚಿಸ ಬೇಕು ಎಂದು ಅವರು ಒತ್ತಾಯಿಸಿದರು. ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ವಕೀಲರು ಬೆಂಗಳೂರು ನಗರ ಜಿಲ್ಲಾಧಿಕಾರಿಯನ್ನು ಸಂಪರ್ಕಿಸಿ, ನನ್ನ ಪತ್ರದ ಪ್ರತಿಯನ್ನು ಪಡೆದು, ಅದನ್ನು ಪರಿಶೀಲಿಸಿ, ಕ್ರಿಕೆಟಿಗ ವಿರಾಟ್ ಕೊಹ್ಲಿಯನ್ನು ರಕ್ಷಿಸಬೇಕು. ಜಿಲ್ಲಾ ಮ್ಯಾಜಿಸ್ಟ್ರೇಟ್ ಜಗದೀಶ್ ಪತ್ರದ ಪ್ರತಿಯನ್ನು ನೀಡಲು ನಿರಾಕರಿಸಿದರೆ, ವಕೀಲರು ನೇರವಾಗಿ ನನ್ನನ್ನು ಸಂಪರ್ಕಿಸಬಹುದು. ಈ ಪತ್ರದ ಸಹಾಯದಿಂದ ವಿರಾಟ್ ಕೊಹ್ಲಿ ನಿರ್ದೋಷಿ ಎಂದು ಸಾಬೀತಾಗುತ್ತಾರೆಂದು ನನಗೆ ವಿಶ್ವಾಸವಿದೆ ಎಂದು ಅನುಪಮಾ ಶೆಣೈ ತಿಳಿಸಿದರು.









