ಪ್ರಧಾನಮಂತ್ರಿ ಸೂರ್ಯಘರ್ ಯೋಜನೆ ಸಬ್ಸಿಡಿ ಅವಕಾಶ ಬಳಸಿಕೊಳ್ಳಿ: ಸಂಸದ ಕೋಟ ಶ್ರೀನಿವಾಸ ಪೂಜಾರಿ

ಮಣಿಪಾಲ, ಜು.19: ಪ್ರಧಾನಮಂತ್ರಿ ಸೂರ್ಯಘರ್ ಯೋಜನೆ ಯನ್ನು ಶೀಘ್ರವೇ ಅನುಷ್ಠಾನ ಮಾಡುವ ಮೂಲಕ ರಾಷ್ಟ್ರೀಕೃತ ಬ್ಯಾಂಕಿನಿಂದ ಸಾಲ ಸೌಲಭ್ಯ ಪಡೆದು ಕೇಂದ್ರ ಸರ್ಕಾರದಿಂದ 78,000 ರೂ.ಸಬ್ಸಿಡಿ ಪಡೆಯುವ ಅವಕಾಶವನ್ನು ಜಿಲ್ಲೆಯ ಗೃಹ ಬಳಕೆಯ ಬಳಕೆದಾರರು ಬಳಸಿಕೊಳ್ಳಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಉಡುಪಿ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಸೂರ್ಯ ಘರ್ ಪ್ರಗತಿ ಪರಿಶೀಲನೆಗಾಗಿ ಇಂದು ಕರೆದ ಸಭೆಯಲ್ಲಿ ನಿಟ್ಟೆ, ಮಿಜಾರು, ಕೋಟತಟ್ಟು, ಉಪ್ಪೂರು, ಕಿರಿಮಂಜೇಶ್ವರ ಸೇರಿದಂತೆ ಅಲ್ಲಿನ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ವಿದ್ಯುತ್ ಬಳಕೆಯ ಪ್ರತಿ ಕುಟುಂಬಗಳು ಸ್ವಾವಲಂಬನೆ ಸಾಧಿಸಲು ಪ್ರಧಾನಮಂತ್ರಿ ಸೂರ್ಯಘರ್ ಯೋಜನೆ ನೆರವಾಗುತ್ತದೆ. ರಾಷ್ಟ್ರೀಕೃತ ಬ್ಯಾಂಕುಗಳು ಇದಕ್ಕಾಗಿ 2.50 ಲಕ್ಷ ರೂ. ಸಾಲ ಸೌಲಭ್ಯ ನೀಡುತ್ತಿದ್ದು, 78,000 ರೂ. ಸಬ್ಸಿಡಿ ಸಹ ನೀಡಲಾಗುತ್ತಿದೆ. ಆಸಕ್ತ ಫಲಾನುಭವಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ, ಹೆಸರು ನೊಂದಾಯಿಸಿಕೊಂಡು ವೆಂಡರ್‌ಗಳ ಮೂಲಕ ವಿದ್ಯುತ್ ಸಂಪರ್ಕ ಪಡೆಯಬಹುದಾಗಿದೆ ಎಂದು ಅವರು ವಿವರಿಸಿದರು.
ಜಿಲ್ಲೆಯಲ್ಲಿ ಕುಂದಾಪುರ ಪುರಸಭಾ ಸದಸ್ಯರಾದ ಶೇಖರ ಪೂಜಾರಿ, ಕಾಪು ಪುರಸಭಾ ಸದಸ್ಯರಾದ ಅನಿಲ್, ನಿಟ್ಟೆ ಗ್ರಾಮ ಪಂಚಾಯತ್ ಸದಸ್ಯರಾದ ನಿತಿನ್ ಕೇಂದ್ರ ಸರಕಾರದ ಸೂರ್ಯ ಘರ್ ಯೋಜನೆಯ ಅನುಷ್ಠಾನ ಸಮಿತಿಯ ಸದಸ್ಯರಾಗಿ ಜಿಲ್ಲೆಗೆ ನಾಮ ನಿರ್ದೇಶಿತರಾಗಿದ್ದು, ಸೂರ್ಯ ಘರ್ ಯೋಜನೆಯ ಅನುಷ್ಠಾನಕ್ಕೆ ಜನರೊಂದಿಗೆ ಸಂಪರ್ಕ ಸಾಧಿಸಿ ದುಡಿಯುತ್ತಿದ್ದಾರೆ ಎಂದು ಅವರು ಹೇಳಿದರು.
ಜಿಲ್ಲೆಯ 161 ಗ್ರಾಮ ಪಂಚಾಯತ್ ಮತ್ತು ನಗರಾಡಳಿತ ಸಂಸ್ಥೆಗಳಲ್ಲೂ ಈ ಯೋಜನೆ ಅನುಷ್ಠಾನ ಗೊಳ್ಳುತ್ತಿದೆ. ಪಂಚಾಯತ್ ವ್ಯಾಪ್ತಿಯಲ್ಲಿ ಯಾರೇ ಸೂರ್ಯ ಘರ್ ಯೋಜನೆ ಅಳವಡಿಸಿಕೊಂಡರೆ ಸ್ಥಳೀಯ ಪಂಚಾಯತ್‌ಗೆ 1,000 ರೂ. ಪ್ರೋತ್ಸಾಹ ಧನ ಸಿಗಲಿದೆ ಎಂದು ಹೇಳಿದ ಅವರು, ಪ್ರತಿ ಗ್ರಾಪಂಗಳು ಯೋಜನೆಯ ಅನುಷ್ಠಾನಕ್ಕೆ ಶ್ರಮಿಸಬೇಕು ಎಂದರು ಮನವಿ ಮಾಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಯೋಜನಾ ನಿರ್ದೇಶಕ ಉದಯ್ ಕುಮಾರ್ ಶೆಟ್ಟಿ, ಮೆಸ್ಕಾಂ ಸೂಪರಿಟೆಂಡೆಂಟ್ ದಿನೇಶ್ ಉಪಾಧ್ಯಯ ಮುಂತಾದವರು ಉಪಸ್ಥಿತರಿದ್ದರು.







