ಪ್ರಧಾನಮಂತ್ರಿ ಆವಾಸ್ ಗೃಹ ನಿರ್ಮಾಣ ಯೋಜನೆ| ಒಂದು ಕೋಟಿ ಮನೆ ನಿರ್ಮಾಣದ ಗುರಿ: ಸಂಸದ ಕೋಟ

ಸಾಲಿಗ್ರಾಮ: ಪ್ರಧಾನಮಂತ್ರಿ ಆವಾಸ್ ಗೃಹ ನಿರ್ಮಾಣ ಯೋಜನೆಯ ಮೂಲಕ ಭಾರತ ಸರಕಾರ ಸರ್ವರಿಗೂ ಸೂರು ಒದಗಿಸಲು 2ನೇ ಹಂತದ ಗೃಹ ನಿರ್ಮಾಣ ಯೋಜನೆ ಕೈಗೆತ್ತಿಕೊಳ್ಳಲಿದೆ. ಇದರಡಿ ಮುಂದಿನ 5 ವರ್ಷಗಳಲ್ಲಿ ದೇಶದಾದ್ಯಂತ ನಗರ ಪ್ರದೇಶಗಳಲ್ಲಿ ಒಂದು ಕೋಟಿ ಬಡಜನರಿಗೆ ಮನೆ ಒದಗಿಸಲು ಸಹಾಯಧನ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಸಾಲಿಗ್ರಾಮ ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಸರ್ವರಿಗೂ ಸೂರು ಯೋಜನೆಯ ಕಾರ್ಯಗಾರವನ್ನು ಉದ್ಘಾಟಿಸಿ, ಫಲಕ ಅನಾವರಣಗೊಳಿಸಿ ಅವರು ಮಾತನಾಡುತಿದ್ದರು.
ಇದಕ್ಕಾಗಿ ಈಗಾಗಲೇ ಪ್ರತಿ ನಗರಪ್ರದೇಶದಲ್ಲಿರುವ ಬಡವರನ್ನು ಗುರುತಿಸಿ, ಅವರಿಗೆ ಮನೆಮತ್ತು ನಿವೇಶನ ಒದಗಿಸಲು ನಗರ ಸ್ಥಳೀಯಾಡಳಿತ ಜನಪ್ರತಿನಿಧಿಗಳು ಶ್ರಮಿಸಬೇಕು ಎಂದು ಪೂಜಾರಿ ಅಧಿಕಾರಿಗಳಿಗೆ ಸೂಚಿಸಿದರು.
ಈಗಾಗಲೇ ತಳಕಟ್ಟು ಹಾಕಿ ಕಾಯುತ್ತಿರುವ ಹಾಗೂ ಮುಕ್ತಾಯ ಹಂತದಲ್ಲಿರುವ ಮನೆಗೂ ಈ ಯೋಜನೆ ಯನ್ನು ವಿಸ್ತರಿಸಲು ಸ್ಥಳೀಯ ನಗರಾಡಳಿತ ಜನಪ್ರತಿನಿಧಿಗಳು ವಿನಂತಿಸಿದಾಗ ಈ ಬಗ್ಗೆ ಇಲಾಖೆ ಯೊಂದಿಗೆ ಹಾಗೂ ಮೇಲಾಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಕೋಟ ಭರವಸೆ ನೀಡಿದರು.
ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಫಲಾನುಭವಿಯಾಗಿ ಮಹಿಳೆಯರಿಗೆ ಪ್ರಾಧಾನ್ಯತೆ ನೀಡಲಾ ಗುವುದು. ಆದರೂಮಾಜಿ ಯೋಧರು, ವಿಧುರರು, ಅಂಗವಿಕಲರು, ಹಿರಿಯ ನಾಗರಿಕರಿಗೂ ಸಹ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಸಂಸದರು ತಿಳಿಸಿದರು.
ಅರ್ಜಿದಾರರು ಆಧಾರ್‌ಕಾರ್ಡ್, ನಿವೇಶನಕ್ಕೆ ಸಂಬಂಧಿಸಿದ ಹಕ್ಕುಪತ್ರ, ಆದಾಯ ಮತ್ತು ಜಾತಿ ಪ್ರಮಾಣ ಪತ್ರ, ಪಡಿತರ ಚೀಟಿ, ಬ್ಯಾಂಕ್ ಖಾತೆಯ ವಿವರಗಳನ್ನು ಸಲ್ಲಿಸಿ, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೋಟ ತಿಳಿಸಿದರು.
ಈಗಾಗಲೇ ಪ್ರಥಮ ಹಂತದ ಪ್ರಧಾನ ಮಂತ್ರಿ ಆವಾಸ್ ಯೋಜನೆ ಪ್ರಗತಿ ಹಂತದಲ್ಲಿದ್ದು, ಉಡುಪಿ ಜಿಲ್ಲೆಯಲ್ಲಿ 1320 ಮನೆಗಳು ಪೂರ್ಣ ಗೊಂಡಿದ್ದು, ಹೊಸದಾಗಿ 2ನೇ ಹಂತದ ಯೋಜನೆಯಡಿ 395 ಅರ್ಜಿಗಳು ಬಂದಿವೆ ಎಂದು ಸಂಸದರು ಸಭೆಗೆ ತಿಳಿಸಿದರು.
ಎಲ್ಲರೂ ಒಟ್ಟಾಗಿ ಶ್ರಮವಹಿಸಿ ದುಡಿದರೆ ಇನ್ನೂ 5 ವರ್ಷದಲ್ಲಿ ಮನೆ ಸಮಸ್ಯೆ ನಗರ ಪ್ರದೇಶದಲ್ಲಿ ಮುಕ್ತಾಯ ವಾಗಲಿದೆ ಎಂದ ಅವರು, ಈ ಗುರಿಯನ್ನು ನಾವು ಖಂಡಿತ ಸಾಧಿಸಬಹುದು ಎಂಬವಿಶ್ವಾಸ ವ್ಯಕ್ತಪಡಿಸಿದರು.
ಸಭೆಯ ಅಧ್ಯಕ್ಷತೆಯನ್ನು ಕುಂದಾಪುರ ಶಾಸಕ ಕಿರಣ್‌ಕುಮಾರ್ ಕೊಡ್ಗಿ ವಹಿಸಿದ್ದರು. ಸಭೆಯಲ್ಲಿ ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧ್ಯಕ್ಷೆ ಸುಕನ್ಯಾ ಶೆಟ್ಟಿ, ಉಪಾಧ್ಯಕ್ಷೆ ಗಿರಿಜಾ, ಸದಸ್ಯರಾದ ಅನುಸೂಯ ಹೆರ್ಳೆ, ರಾಜು ಪೂಜಾರಿ, ಸುಲತಾ ಹೆಗ್ಡೆ, ಶ್ಯಾಮಸುಂದರ್ ನಾಯರ್, ಸಂಜೀವ ದೇವಾಡಿಗ, ಗಣೇಶ್, ರತ್ನಾ ಗಾಣಿಗ ಮತ್ತು ಭಾಸ್ಕರ ಬಂಗೇರ ಉಪಸ್ಥಿತರಿದ್ದರು.
ಉಡುಪಿ ನಗರಸಭೆಯ ಮುಖ್ಯಾಧಿಕಾರಿ ಮಾಲತೇಶ್ ಸ್ವಾಗತಿಸಿದರು. ಸಾಲಿಗ್ರಾಮ ಪಟ್ಟಣ ಪಂಚಾಯತ್‌ನ ಮುಖ್ಯಾಧಿಕಾರಿ ಅಜಯ್ ಭಂಡಾರ್‌ಕರ್ ಪ್ರಾಸ್ತಾವಿಕ ಮಾತನಾಡಿದರು. ಸಭೆಯಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಮೋಹನ್ ರಾಜ್ ಮತ್ತು ಕುಂದಾಪುರ, ಕಾಪು, ಕಾರ್ಕಳದ ಪುರಸಭಾ ಅಧಿಕಾರಿಗಳು ಉಪಸ್ಥಿತರಿದ್ದರು.







