ಕುಂದಾಪುರ: ಸೊಸೈಟಿಗೆ ನುಗ್ಗಿದ ಕಳ್ಳರಿಂದ ಕಳ್ಳತನಕ್ಕೆ ಯತ್ನ ವಿಫಲ!
ಸೈನ್ ಇನ್ ಸೆಕ್ಯೂರಿಟಿ ಸಿಬ್ಬಂದಿ ಸಮಯ ಪ್ರಜ್ಞೆಯಿಂದ ತಪ್ಪಿದ ಕೃತ್ಯ

ಕುಂದಾಪುರ, ಜು.19: ಕುಂದಾಪುರದಲ್ಲಿ ಕಾರ್ಯಚರಿಸುವ ಸೈನ್ ಇನ್ ಸೆಕ್ಯೂರಿಟಿ ಸಂಸ್ಥೆಯ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಸೊಸೈಟಿ ಯೊಂದರಲ್ಲಿನ ಕಳ್ಳತನ ಯತ್ನ ವಿಫಲಗೊಂಡು, ಕಳ್ಳರು ಸ್ಥಳದಿಂದ ಪರಾರಿಯಾಗಿರುವ ಬಗ್ಗೆ ವರದಿಯಾಗಿದೆ.
ಬೈಂದೂರು ತಾಲೂಕಿನ ಅರೆಶಿರೂರು ಎಂಬಲ್ಲಿರುವ ಕೊಲ್ಲೂರು ಸೊಸೈಟಿಗೆ ಕಳ್ಳತನಕ್ಕೆ ಯತ್ನಿಸಿದ್ದು ಕುಂದಾಪುರದಲ್ಲಿ ಕಾರ್ಯಚರಿಸುವ ಸೈನ್ ಇನ್ ಸೆಕ್ಯೂರಿಟಿ ಸಂಸ್ಥೆಯ ಸಿಬ್ಬಂದಿಯ ಸಮಯ ಪ್ರಜ್ಞೆ ಯಿಂದ ಕಳ್ಳತನ ಯತ್ನ ವಿಫಲಗೊಂಡಿದ್ದು ಕಳ್ಳರು ಸ್ಥಳದಿಂದ ಪರಾರಿಯಾಗಿದ್ದಾರೆ.
ಕುಂದಾಪುರ ತಾಲೂಕಿನ ಅರೆಶಿರೂರಿನಲ್ಲಿ ಕೊಲ್ಲೂರು ವ್ಯವಸಾಯ ಸಹಕಾರಿ ಸೊಸೈಟಿಗೆ ಜು.18 ಶುಕ್ರವಾರ ಮಧ್ಯರಾತ್ರಿ 2.15ರ ವೇಳೆಗೆ ಬಿಳಿ ಬಣ್ಣದ ಕಾರಲ್ಲಿ ಬಂದ ಕಳ್ಳರು, ಗ್ಯಾಸ್ ಕಟ್ಟರ್ ಮೂಲಕ ಕಿಟಕಿಯನ್ನು ಮುರಿದು ಒಳ ನುಗ್ಗಿದೆ. ಈ ವಿಚಾರ ಸೈನ್ ಇನ್ ಸೆಕ್ಯುರಿಟಿ ಸಂಸ್ಥೆಯ ಕುಂದಾಪುರ ಘಟಕದಲ್ಲಿ ಸಿಸಿಟಿವಿ ನೇರ ವೀಕ್ಷಣೆ ಮಾಡುತ್ತಿದ್ದ ತಂಡದ ಗಮನಕ್ಕೆ ಬಂದಿದೆ. ಕೂಡಲೇ ಅವರು ಈ ಮಾಹಿತಿಯನ್ನು ಬ್ಯಾಂಕಿನ ಮ್ಯಾನೇಜರ್, ಬೈಂದೂರು ಎಸ್‌ಐ, ಸಿಪಿಐ, ಕುಂದಾಪುರ ಡಿವೈಎಸ್ಪಿ ಗಮನಕ್ಕೆ ತಂದಿದ್ದಾರೆ.
ಮಾಹಿತಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಮಾರಕಾಸ್ತ್ರಗಳನ್ನು ಹೊಂದಿದ್ದ ಕಳ್ಳರು ಬ್ಯಾಂಕಿನ ಕಿಟಕಿ ಮುರಿದು ಕಳ್ಳತನಕ್ಕೆ ಯತ್ನಿಸುವ ವೇಳೆ ಪೊಲೀಸರು ಬರುತ್ತಿರುವುದನ್ನು ಕಂಡು ಕೂಡಲೇ ಕಾರಿನಲ್ಲಿ ಅಲ್ಲಿಂದ ಪರಾರಿಯಾಗಿದ್ದಾರೆ. ಬಳಿಕ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಕಳ್ಳರ ಸೆರೆಗಾಗಿ ಕ್ಷಿಪ್ರ ನಾಕಾಬಂದಿ ಹಾಕಿ ಕಾರುಗಳನ್ನು ತಪಾಸಣೆ ನಡೆಸಿದ್ದರೂ ಕಳ್ಳರು ಪತ್ತೆಯಾಗಲಿಲ್ಲ ಎಂದು ತಿಳಿದುಬಂದಿದೆ.
ಸೈನ್ ಇನ್ ಸೆಕ್ಯೂರಿಟಿ ಸಂಸ್ಥೆ ಕಣ್ಗಾವಲು ನಡೆಸುತ್ತಿದ್ದ ವೇಳೆ ಸಿಸಿ ಕ್ಯಾಮೆರಾದಲ್ಲಿ ಇಬ್ಬರು ಕಳ್ಳರು ಕೈಯಲ್ಲಿ ಮಾರಕಾಸ್ತ್ರ ಹಿಡಿದು ಬ್ಯಾಂಕ್ ಆವರಣದಲ್ಲಿ ಸಂಚರಿಸುವುದು ಕಂಡು ಬಂದಿದೆ. ಒಂದು ಸಿಸಿ ಟಿವಿಗೂ ಹಾನಿ ಮಾಡಿದ್ದಾರೆ ಎನ್ನಲಾಗಿದೆ. ಬೈಂದೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.







