ದಲಿತರ ಬೇಡಿಕೆ ಈಡೇರಿಸುವಲ್ಲಿ ಸರಕಾರಗಳ ನಿರಾಸಕ್ತಿ: ಸಂಜೀವ ಬಳ್ಕೂರು ಅರೋಪ

ಉಡುಪಿ: ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗೆ ಸರಕಾರ ವಿತರಿಸಲೇಬೇಕಾದ ಅವರ ಹಕ್ಕಿನ ಭೂಮಿಯನ್ನು ವಿತರಿಸದೆ ಅನ್ಯಾಯ ಎಸಗುತ್ತಿದೆ. ದಲಿತರ ಬೇಡಿಕೆ ಕೇವಲ ಬೇಡಿಕೆಯಾಗಿಯೇ ಉಳಿದಿದೆ. ಈ ನಿಟ್ಟಿನಲ್ಲಿ ದಲಿತರು ಒಗ್ಗಟ್ಟಿನಿಂದ ಸಂಘಟಿತರಾಗಿ ಹೋರಾಟ ನಡೆಸಬೇಕು ಎಂದು ದಲಿತ ಹಕ್ಕುಗಳ ಸಮಿತಿ ಉಡುಪಿ ಜಿಲ್ಲಾ ಸಂಚಾಲಕ ಸಂಜೀವ ಬಳ್ಕೂರು ಹೇಳಿದ್ದಾರೆ.
ದಲಿತ ಹಕ್ಕುಗಳ ಸಮಿತಿಯ ವತಿಯಿಂದ ಕುಂದಾಪುರ ತಾಲೂಕಿನ ಬಳ್ಕೂರಿನಲ್ಲಿ ನಡೆದ ಜನಜಾಗೃತಿ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ದಲಿತರಿಗಾಗಿ ಮೀಸಲಿರಿಸಿದ ಅನುದಾನಗಳನ್ನು ಅನ್ಯ ಉದ್ಧೇಶಕ್ಕೆ ಬಳಸಿ ದ್ರೋಹವೆಸಗುತ್ತಿರುವ ಸರಕಾರ, ಬ್ಯಾಕ್‌ಲಾಗ್ ಹುದ್ದೆಗಳನ್ನು ತುಂಬದೆ ವಂಚಿಸುತ್ತಿದೆ. ದೇಶದ ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವ ಮೂಲಕ ದಲಿತ ಯುವಕ ಯುವತಿ ಯರನ್ನು ಉದ್ಯೋಗ ವಂಚಿತರನ್ನಾಗಿ ಸುತ್ತಿದೆ ಎಂದು ಅವರು ತಿಳಿಸಿದರು.
ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ್, ಕಟ್ಟಡ ಮತ್ತು ಇತರ ನಿರ್ಮಾಣ ಕಾಮಗಾರಿ ಕಾರ್ಮಿಕರಿಗಿರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಜನಪರ ಹೋರಾಟಗಾರ ಶ್ರೀರಾಮ ದಿವಾಣ ಸಂಘಟನೆಯ ಅನಿವಾರ್ಯತೆಯ ಬಗ್ಗೆ ತಿಳಿಸಿದರು. ಸಾಮಾಜಿಕ ಹೋರಾಟಗಾರರಾದ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ಭೂಮಿ ಹಕ್ಕಿನ ಬಗ್ಗೆ ಮಾತನಾಡಿದರು. ಅಧ್ಯಕ್ಷತೆಯನ್ನು ಬಳ್ಕೂರು ಗ್ರಾಮ ಪಂಚಾಯತ್ ಸದಸ್ಯೆ ಸುಶೀಲಾ ಬಳ್ಕೂರು ವಹಿಸಿದ್ದರು.
ಸಭೆಯಲ್ಲಿ ದಲಿತ ಹಕ್ಕುಗಳ ಸಮಿತಿಯ ಬಳ್ಕೂರು ಗ್ರಾಮ ಸಮಿತಿಯನ್ನು ರಚಿಸಲಾಯಿತು. ಅಣ್ಣಪ್ಪ ಬಳ್ಕೂರು ಸಂಚಾಲಕರನ್ನಾಗಿಯೂ, ವಿಜಯ ಕುಮಾರ್ ಹಾಗೂ ವಾಸು ಕುದ್ರು ಸಹ ಸಂಚಾಲಕರನ್ನಾ ಗಿಯೂ, ಸುಶೀಲಾ ಬಳ್ಕೂರು ಕೋಶಾಧಿಕಾರಿಯನ್ನಾಗಿಯೂ, ರಾಮಚಂದ್ರ, ಪೂರ್ಣಿಮಾ, ಮಂಜುಳಾ, ಶಾಂತಾ, ಪೂರ್ಣಚಂದ್ರ, ಗಂಗಾಧರ, ಮಹೇಶ್, ಲಕ್ಷ್ಮಿ, ನರಸಿಂಹ, ಮಹೇಶ ಸಾಲಿಗ್ರಾಮ ಮಹೇಶ ಬಳ್ಕೂರು, ಕೃಷ್ಣಮೂರ್ತಿ ಕಾರ್ಯ ಕಾರಿಣಿ ಸದಸ್ಯರನ್ನಾಗಿಯೂ ಆಯ್ಕೆಯಾದರು.







