ಮಕ್ಕಳು, ಮಹಿಳೆಯರು ಕಲಿತರಷ್ಟೇ ಯಕ್ಷಗಾನ ಉಳಿವು ಸಾಧ್ಯ: ತಲ್ಲೂರು

ಉಡುಪಿ, ಜು.21: ಯಕ್ಷಗಾನ ಉಳಿದು ಬೆಳೆಯಬೇಕಾದರೆ ಮಕ್ಕಳಿಗೆ ಹಾಗೂ ಕಲಾ ಸಂಘಟನೆ ಆಗಬೇಕಾದರೆ ಮಹಿಳೆಯರಿಗೆ ಯಕ್ಷಗಾನ ಕಲಿಸುವಿಕೆಗೆ ಒತ್ತು ನೀಡುವ ಅಗತ್ಯವಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದ್ದಾರೆ.
ಕರ್ನಾಟಕ ಯಕ್ಷಗಾನ ಅಕಾಡೆಮಿ ಸಹಕಾರದಲ್ಲಿ ಬೆಂಗಳೂರಿನ ರಂಗಸ್ಥಳ ಯಕ್ಷಮಿತ್ರ ಕೂಟದ ಬೆಳ್ಳಿ ಹಬ್ಬ ಸಂಭ್ರಮಾಚರಣೆ ’ರಜತಪರ್ವ -2025 ’ ಕಾಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಯಕ್ಷಗಾನ ಅಕಾಡೆಮಿ ಪ್ರಸ್ತುತ ಮಕ್ಕಳು ಮತ್ತು ಮಹಿಳಾ ಯಕ್ಷಗಾನ ಕಲಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಒಬ್ಬ ಮಹಿಳೆ ಯಕ್ಷಗಾನ ಕಲಿತರೆ ಆಕೆಯಿಂದ ಹತ್ತು ಮಂದಿ ಯಕ್ಷಗಾನ ಕಲಿಯುತ್ತಾರೆ. ಹೀಗಾಗಿ ಸಂಘಟನೆ ಬೆಳೆಯುತ್ತದೆ, ಬಲಗೊಳ್ಳುತ್ತದೆ. ಇದು ಯಕ್ಷಗಾನದ ಭವಿಷ್ಯದ ದೃಷ್ಟಿಯಿಂದ ಒಂದು ಒಳ್ಳೆಯ ಸಂಕೇತ ಎಂದರು.
ಮಕ್ಕಳಲ್ಲಿ ಸಂಸ್ಕೃತಿ, ಸಂಸ್ಕಾರ ಬೆಳೆಸಬೇಕಾದರೆ ಅವರಿಗೆ ಯಕ್ಷಗಾನ ಕಲಿಸಬೇಕು. ಯಕ್ಷಗಾನ ಕಲಿತ ಮಕ್ಕಳು ಎಂದಿಗೂ ಸಮಾಜ ಕಂಟಕರಾಗಿ ಬೆಳೆಯಲಾರರು. ರಾಮಾಯಣ, ಮಹಾಭಾರತ ಮೊದಲಾದ ಪುರಾಣ ಪ್ರಸಂಗಗಳ ನೀತಿಕತೆಗಳನ್ನು ರಂಗಸ್ಥಳದಲ್ಲಿ ಪ್ರದರ್ಶಿಸುವುದಲ್ಲದೆ ತಮ್ಮ ಬದುಕಿ ನಲ್ಲಿಯೂ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದರಲ್ಲಿ ಸಂಶಯವಿಲ್ಲ. ಮಕ್ಕಳು ಸುಸಂಸ್ಕೃತರಾದರೆ ಹೆತ್ತ ತಂದೆತಾಯಿ ವೃದ್ಧಾಪ್ಯದಲ್ಲಿ ವೃದ್ಧಾಶ್ರಮಗಳನ್ನು ಸೇರುವುದು ತಪ್ಪುತ್ತದೆ ಎಂದು ಅವರು ತಿಳಿಸಿದರು.
ಇಂದು ಕನ್ನಡ ಉಳಿಸಬೇಕು, ಬೆಳೆಸಬೇಕು ಎನ್ನುವ ಮಾತು ಎಲ್ಲೆಡೆ ಕೇಳಿ ಬರುತ್ತಿದೆ. ಆದರೆ ಶುದ್ಧ ಕನ್ನಡ ಮಾತನಾಡುವುದನ್ನು ನಾವು ಯಕ್ಷಗಾನದಲ್ಲಿ ಮಾತ್ರ ಕಾಣಲು ಸಾಧ್ಯ. ಕಲಾವಿದರ ಆಡು ಭಾಷೆ ಯಾವುದೇ ಆಗಿರಲಿ, ರಂಗಸ್ಥಳಕ್ಕೆ ಬಂದಮೇಲೆ ಅವರು ಶುದ್ಧ ಕನ್ನಡ ಮಾತುಗಳನ್ನಾಡುತ್ತಾರೆ. ಇದು ಯಕ್ಷಗಾನದ ವೈಶಿಷ್ಟ್ಯ ಅಂದ ಮೇಲೆ ಕಲೆಯ ಬೆಳವಣಿಗೆಯ ಜೊತೆಗೆ ಕನ್ನಡದ ಉಳಿವಿನ ಕಾರ್ಯ ಜೊತೆಗೇನೆ ಸಾಗುತ್ತಿದೆ ಎಂದು ಅವರು ಹೇಳಿದರು.
ಕರಾವಳಿಗರ ಒಕ್ಕೂಟದ ಗೌರವಾಧ್ಯಕ್ಷ ಡಾ.ಸುರೇಶ್ ಜಿ.ಕೆ., ಸಹಕಾರ ಸಂಘಗಳ ಉಪ ನಿಬಂಧಕ ಎಂ.ಪಿ.ಮಟಜುನಾಥ್ ಮಾತನಾಡಿದರು. ಅಖಿಲ ಕರ್ನಾಟಕ ಗಾಣಿಗರ ಸಂಘದ ಅಧ್ಯಕ್ಷ ರಾಜಶೇಖರ ಗಾಣಿಗ, ರಂಗಸ್ಥಳದ ಅಧ್ಯಕ್ಷ ಆರ್.ಕೆ.ನಾಗೂರು, ಪ್ರಧಾನ ಕಾರ್ಯದರ್ಶಿ ಕೆ.ಎಂ.ನಾಗೂರು, ಕೆ.ಎಂ.ಶೇಖರ್ ಮೊದಲಾದವರು ಉಪಸ್ಥಿತರಿದ್ದರು.
ಡಾ.ಸುರೇಂದ್ರ ಪಣಿಯೂರು, ಎಚ್.ಸುಜಯೇಂದ್ರ ಹಂದೆ ಹಾಗೂ ಪ್ರೊ,ಎಸ್,ವಿ.ಉದಯ ಕುಮಾರ್ ಶೆಟ್ಟಿ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ನಡುತಿಟ್ಟಿನ ಹಾರಾಡಿ, ಮಟಪಾಡಿ ಶೈಲಿಗಳಲ್ಲಿನ ಸಾಮ್ಯತೆ, ಭಿನ್ನತೆ ಮತ್ತು ವೈಶಿಷ್ಟ್ಯತೆ ಕುರಿತು ವಿಚಾರ ಸಂಕಿರಣ ನಡೆಸಿಕೊಟ್ಟರು.







