ದಲಿತರ ಸಮಸ್ಯೆ: ಕಂದಾಯ ಸಚಿವರಿಗೆ ದಸಂಸ ಮನವಿ

ಉಡುಪಿ, ಜು.31: ಬುಧವಾರ ಉಡುಪಿ ಜಿಲ್ಲೆಗೆ ಭೇಟಿ ನೀಡಿದ ರಾಜ್ಯ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರನ್ನು ಭೇಟಿಯಾದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಮಿತಿಯ ಅಂಬೇಡ್ಕರ್ ವಾದ ಸಮಿತಿ ನಿಯೋಗ ಜಿಲ್ಲೆಯಲ್ಲಿ ದಲಿತರು ಎದುರಿಸುತ್ತಿರುವ ಭೂ ಸಂಬಂಧಿ ಸಮಸ್ಯೆಗಳ ಕುರಿತು ಸಚಿವರ ಗಮನ ಸೆಳೆದು ಈ ಸಂಬಂಧ ಮನವಿಯೊಂದನ್ನು ಅರ್ಪಿಸಿತು.
ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಶೇ.65ರಷ್ಟು ಮಂದಿ ಇನ್ನೂ ವಸತಿ-ಭೂರಹಿತರಾಗಿದ್ದಾರೆ. ಈ ಬಗ್ಗೆ ಸಂಘಟನೆ ಕಳೆದ ಒಂದೂವರೆ ದಶಕದಿಂದ ಹೋರಾಟ ಮಾಡಿಕೊಂಡು ಬರುತಿದ್ದು, ಭೂಮಿ ಹಕ್ಕಿನ ಸಮಸ್ಯೆಗಳ ಕುರಿತಂತೆ ತುರ್ತು ಗಮನ ಹರಿಸಿ ಪರಿಹಾರ ನೀಡುವಂತೆ ನಿಯೋಗ ಮನವಿ ಮಾಡಿಕೊಂಡಿತು.
ಇವುಗಳಲ್ಲಿ ಜಿಲ್ಲೆಯಲ್ಲಿರುವ ಡಿಸಿ ಮನ್ನಾ ಭೂಮಿಗಳನ್ನು ಅರ್ಹ ಭೂ ರಹಿತ ದಲಿತ ಮತ್ತು ಪ.ಪಂಗಡ ದವರಿಗೆ ಮರು ಹಂಚಿಕೆ ಮಾಡುವಂತೆ, ಅಕ್ರಮ-ಸಕ್ರಮ ಸಮಿತಿಯ ಮುಂದಿರುವ ಪರಿಶಿಷ್ಟರ ಅರ್ಜಿ ಗಳನ್ನು ಆದ್ಯತೆ ಮೇಲೆ ಕೂಡಲೇ ಇತ್ಯರ್ಥಗೊಳಿಸಿ ಭೂಮಂಜೂರಾತಿ ನೀಡುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಅಲ್ಲದೇ ಭೂಕಂದಾಯ ಅಧಿನಿಯಮ 94ಸಿ, 94ಸಿಸಿ ಅಡಿ ಅರ್ಜಿ ಸಲ್ಲಿಸಿರುವ ಪರಿಶಿಷ್ಟರ ಬಾಕಿ ಹಾಗೂ ತಿರಸ್ಕೃತ ಅರ್ಜಿಗಳನ್ನು ಸೂಕ್ತ ಕ್ರಮದ ಮೂಲಕ ಮರುಪರಿಶೀಲಿಸಿ ಅವರು ವಾಸವಾಗಿರುವ ಭೂಮಿ ಗಳನ್ನು ಹಕ್ಕನ್ನು ಅವರಿಗೆ ನೀಡುವಂತೆ ಮನವಿಯಲ್ಲಿ ತಿಳಿಸಲಾಗಿದೆ. ಸಂಘಟನೆಯು ನಡೆಸುತ್ತಿರುವ ದಲಿತರ ಪರ್ಯಾಯ ಕಂದಾಯ ಅದಾಲತ್‌ಗಳ ಬಗ್ಗೆಯೂ ಸಚಿವರಿಗೆ ಮನವರಿಕೆ ಮಾಡಿ ಕೊಡಲಾಯಿತು.
ನಿಯೋಗದಲ್ಲಿ ರಾಜ್ಯ ಸಂಘಟನಾ ಸಂಚಾಲಕ ಸುಂದರ ಮಾಸ್ಟರ್, ವಿಭಾಗೀಯ ಸಂಘಟನಾ ಸಂಚಾಲಕ ಶಾಮರಾಜ್ ಬಿರ್ತಿ, ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ ಗಿಳಿಯಾರು, ಜಿಲ್ಲಾ ಸಂಘಟನಾ ಸಂಚಾಲಕ ಭಾಸ್ಕರ್ ನಿಟ್ಟೂರು, ಕುಂದಾಪುರ ತಾಲೂಕು ಸಂಚಾಲಕ ರಾಜು ಬೆಟ್ಟಿನಮನೆ, ಬೈಂದೂರು ತಾಲೂಕು ಸಂಚಾಲಕ ಶಿವರಾಜ್, ಕಾಪು ತಾಲೂಕು ಸಂಚಾಲಕ ರಾಜೇಂದ್ರನಾಥ್, ಸಂದೀಪ್ ಕಿರಿಮಂಜೇಶ್ವರ, ರಾಘವ ಬೆಳ್ಳೆ ಉಪಸ್ಥಿತರಿದ್ದರು.







