ಹೆದ್ದಾರಿ ಹೊಂಡ ಮುಚ್ಚಿದ ಟ್ರಾಫಿಕ್ ಪೊಲೀಸರಿಗೆ ಗೌರವಾರ್ಪಣೆ

ಉಡುಪಿ, ಆ.1: ಅಂಬಲಪಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಂಡಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿದ ಉಡುಪಿ ನಗರ ಸಂಚಾರ ಪೊಲೀಸ್ ಠಾಣೆಯ ಪೊಲೀಸರಿಗೆ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ಉಡುಪಿ ಜಿಲ್ಲಾ ಘಟಕದ ವತಿಯಿಂದ ಶುಕ್ರವಾರ ಗೌರವಾರ್ಪಣೆ ನಡೆಯಿತು.
ಉಡುಪಿ ಸಂಚಾರ ಪೊಲೀಸ್ ಠಾಣೆಯ ಉಪನಿರೀಕ್ಷಕ ಪ್ರಕಾಶ್ ಮತ್ತು ಸಿಬ್ಬಂದಿಗಳನ್ನು ಈ ಸಂದರ್ಭ ದಲ್ಲಿ ಸನ್ಮಾನಿಸಲಾಯಿತು. ಅಂಬಲಪಾಡಿ ಬಳಿ ಸಾಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆಗಾಲಕ್ಕೆ ಹೊಂಡಗುಂಡಿಗಳು ಬಿದ್ದು ವಾಹನ ಸಂಚಾರವೇ ಕಷ್ಟಕರವಾಗಿದೆ. ಅಂಬಲಪಾಡಿ ಕಾರ್ತಿಕ್ ಹೋಟೆಲ್ ಬಳಿ ದೊಡ್ಡ ಪ್ರಮಾಣದಲ್ಲಿ ಗುಂಡಿಗಳು ನಿರ್ಮಾಣವಾಗಿದ್ದು ದ್ವಿಚಕ್ರ ವಾಹನ ಸವಾರರು ಸ್ವಲ್ಪ ಎಡವಿ ದರೂ ಬೀಳೋದು ಗ್ಯಾರಂಟಿ ಎಂದು ಕರವೇ ಗೌರವಾಧ್ಯಕ್ಷ ಅನ್ಸಾರ್ ಅಹಮದ್ ತಿಳಿಸಿದರು.
ಹಲವರು ಇಲ್ಲಿ ಬಿದ್ದು ಗಾಯ ಮಾಡಿಕೊಂಡದ್ದೂ ಇದೆ. ಇನ್ನು ದೊಡ್ಡ ವಾಹನಗಳು ಹೊಂಡದಲ್ಲಿ ಸಿಕ್ಕಿಬಿದ್ದು ಗಂಟೆಗಟ್ಟಲೇ ಟ್ರಾಫಿಕ್ ಜಾಮ್ ಆಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಮಸ್ಯೆಗಳ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿದ್ದರು. ಆದರೆ ಸಾರ್ವಜನಿಕರ ಹಾಗೂ ವಾಹನ ಸವಾರರ ಸಮಸ್ಯೆಗಳಿಗೆ ಮರುಗಿದ ಟ್ರಾಫಿಕ್ ಪೊಲೀಸರು ಮಣ್ಣು ಹಾಕಿ ಮುಚ್ಚುವ ಕೆಲಸ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕರವೇ ಮುಖಂಡರಾದ ಸಯ್ಯದ್ ನಿಜಾಮ್, ಸತೀಶ್ ಸನಿಲ್, ಪ್ರಶಾಂತ್ ಸಾಲಿಯಾನ್, ಅಬ್ದುಲ್ ಖಾದರ್ ಶಿರ್ವ, ಕಲಂಧರ್ ಶಫಿ, ಹಮೀದ್, ಜ್ಯೋತಿ ಸೇರಿಗಾರ್ತಿ, ದೇವಕಿ ಬಾರಕೂರು, ಕಿರಣ್ ಪ್ರತಾಪ್, ಚಂದ್ರಕಲಾ, ಮೋಹಿನಿ, ಸವಿತಾ ಮೊದಲಾದವರು ಉಪಸ್ಥಿತರಿದ್ದರು.







