ಉಡುಪಿ ಜಿಲ್ಲೆಯ ಅಲ್ಪಸಂಖ್ಯಾತರ ಅಭಿವೃದ್ಧಿಗೆ ವಿಶೇಷ ಅನುದಾನಕ್ಕೆ ಆಗ್ರಹ

ಉಡುಪಿ, ಆ.1: ಜಿಲ್ಲೆಯ 7 ತಾಲೂಕುಗಳಲ್ಲಿ ವಾಸಿಸುವ ಅಲ್ಪಸಂಖ್ಯಾತ ಸಮುದಾಯದ ಜನರು ಮೂಲಭೂತ ಸೌಕರ್ಯದ ಕೊರತೆ, ಧಾರ್ಮಿಕ ಸಂಸ್ಥೆಗಳ ಅಭಿವೃದ್ಧಿ, ಸ್ವಯಂ ಉದ್ಯೋಗ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಎದುರಿಸುತಿದ್ದು ಸರಕಾರ ಜಿಲ್ಲೆಗೆ ವಿಶೇಷ ಅನುದಾನ ಮಂಜೂರು ಮಾಡಬೇಕು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಮಾಜಿ ಅಧ್ಯಕ್ಷ ಎಂ.ಪಿ.ಮೊಯಿದಿನಬ್ಬ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಸಂಬಂಧ ಅವರು ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ಅಲ್ಪಸಂಖ್ಯಾತ ಕಲ್ಯಾಣ ಸಚಿವರಿಗೆ ಸಲ್ಲಿಸಿದ ಮನವಿಯಲ್ಲಿ ಅವರು, ಜಿಲ್ಲೆಯ ಅಲ್ಪಸಂಖ್ಯಾತ ವರ್ಗದ ಜನರು ರಸ್ತೆ, ಚರಂಡಿ, ಮೂಲಭೂತ ಸೌಕರ್ಯ ಇಲ್ಲದೆ ತೊಂದರೆಗೆ ಒಳಗಾಗಿದ್ದಾರೆ. ಈ ಸಮಸ್ಯೆ ಬಗೆಹರಿಸಲು ಪ್ರತೀ ತಾಲೂಕಿಗೆ ಕನಿಷ್ಠ 50 ಲಕ್ಷ ವಿಶೇಷ ಅನುದಾನ ಮಂಜೂರು ಮಾಡಬೇಕು. ಈ ಸಮುದಾಯದ ನಿವೇಶನ ರಹಿತರಿಗೆ ಆದ್ಯತೆ ಮೇರೆಗೆ ನಿವೇಶನ ನೀಡಲು ಕ್ರಮ ವಹಿಸಬೇಕು.
ನಿವೇಶನ ಲಭ್ಯ ಇಲ್ಲದೆ ಇದ್ದರೆ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ ನಿವೇಶನ ಖರೀದಿಸಿ ಸಾಲದ ರೂಪದಲ್ಲಿ ನಿವೇಶನ ವಿತರಣೆ ಮಾಡಬೇಕು. ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಮೂಲಕ ಅನುಷ್ಠಾನ ಗೊಳಿಸುತ್ತಿರುವ ವಿವಿಧ ಸ್ವಯಂ ಉದ್ಯೋಗ ಯೋಜನೆಗಳಡಿಯಲ್ಲಿ ಯುವ ಸಮುದಾಯಕ್ಕೆ ಸ್ವಯಂ ಉದ್ಯೋಗ ಕೈಗೊಳ್ಳಲು ನೀಡುತ್ತಿರುವ ಗುರಿಯನ್ನು ಹೆಚ್ಚಿಸಬೇಕು. ಧಾರ್ಮಿಕ ಸಂಸ್ಥೆಗಳ ದುರಸ್ಥಿ, ಅಭಿವೃದ್ಧಿಗಾಗಿ ವಕ್ಫ್ ಮಂಡಳಿ ಮತ್ತು ಕಲ್ಯಾಣ ಇಲಾಖೆಯ ಮೂಲಕ ನೀಡಲಾಗುತ್ತಿರುವ ಅನುದಾನ ತೀರಾ ಕಡಿಮೆ ಯಾಗಿದ್ದು ಅದನ್ನು ಹೆಚ್ಚಿಸಿ ತಾಲೂಕಿಗೆ ಕನಿಷ್ಠ 2 ಕೋಟಿ ಅನುದಾನದ ಅವಶ್ಯಕತೆ ಇದೆ ಎಂದು ಮನವಿಯಲ್ಲಿ ಅವರು ತಿಳಿಸಿದ್ದಾರೆ.







