ಜಿಎಸ್‌ಟಿ ಶೋಕಾಸ್ ನೋಟೀಸ್ ಜಾರಿ ಮಾಡಿಲ್ಲ: ಹೊಳೆಯಪ್ಪ

ಉಡುಪಿ: ವಾಣಿಜ್ಯ ತೆರಿಗೆ ಇಲಾಖೆಯ ಉಡುಪಿ ಹಾಗೂ ಮಂಗಳೂರು ವಿಭಾಗದಲ್ಲಿ ಜಿಎಸ್‌ಟಿ ಸಂಬಂಧ ವರ್ತಕರು, ಉದ್ಯಮಿಗಳು ಹಾಗೂ ಸಣ್ಣ ವ್ಯಾಪಾರಿಗಳಿಗೆ ಯಾವುದೇ ರೀತಿಯ ಶೋಕಾಸ್ ನೋಟೀಸ್ ಜಾರಿ ಮಾಡಿಲ್ಲ ಎಂದು ಉಡುಪಿ ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತ ಹೊಳೆಯಪ್ಪ ಎಚ್. ಹೇಳಿದ್ದಾರೆ.
ಉಡುಪಿ ಜಿಲ್ಲಾ ವರ್ತಕರ ಹಿತರಕ್ಷಣಾ ವೇದಿಕೆ ಹಾಗೂ ಲೆಕ್ಕ ಪರಿಶೋಧಕರ ಸಂಘದ ಉಡುಪಿ ಶಾಖೆಯ ಜಂಟಿ ಆಶ್ರಯದಲ್ಲಿ ಸೋಮವಾರ ಅಜ್ಜರಕಾಡಿನ ಪುರಭವನದಲ್ಲಿ ಆಯೋಜಿಸಲಾದ ಜಿಎಸ್‌ಟಿ ಕುರಿತ ವಿಶೇಷ ಮಾಹಿತಿ ಹಾಗೂ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಬ್ಯಾಂಕ್ ಖಾತೆ ವಹಿವಾಟು ಬಗ್ಗೆ ವಿವರ ನೀಡುವಂತೆ ಸೂಚನಾ ಪತ್ರವನ್ನು ವರ್ತಕರಿಗೆ ನೀಡಲಾಗಿದೆ. ಈ ಬಗ್ಗೆ ಯಾರು ಕೂಡ ಆತಂಕ, ಚಿಂತೆ ಪಡುವ ಅಗತ್ಯ ಇಲ್ಲ. ಈ ಕುರಿತ ದಾಖಲೆಗಳನ್ನು ಇಲಾಖೆಗೆ ಸಲ್ಲಿಸಬಹುದಾಗಿದೆ. ನಾವು ಸಮಸ್ಯೆ ಬರುವ ಮೊದಲೇ ಅದಕ್ಕೆ ಪರಿಹಾರ ಕಂಡುಕೊಳ್ಳಬೇಕೆ ಹೊರತು ಸಮಸ್ಯೆ ಬಂದ ನಂತರ ಎಚ್ಚೆತ್ತುಕೊಳ್ಳುವುದರಿಂದ ಯಾವುದೇ ಪ್ರಯೋಜನ ಇಲ್ಲ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಪರಿಣಿತ ಲೆಕ್ಕಪರಿಶೋಧಕ ಕೊಲಿನ್ ರೋಡ್ರಿಗಸ್ ಮಾತನಾಡಿ, ರಾಜ್ಯ ಸರಕಾರ ವ್ಯಾಪಾರಿಗಳಿಗೆ ನೇರವಾಗಿ ಶೋಕಾಸ್ ನೋಟೀಸ್ ಜಾರಿ ಮಾಡಿರುವುದು ಕಾನೂನು ಪ್ರಕಾರ ತಪ್ಪು. ಇದರಿಂದ ಸಾಕಷ್ಟು ಗೊಂದಲಗಳು ನಿರ್ಮಾಣವಾಗಿದ್ದವು. ಅದೇ ರೀತಿ ಒಮ್ಮೆ ಜಾರಿ ಮಾಡಿದ ಶೋಕಾಸ್ ನೋಟೀಸನ್ನು ರದ್ದುಗೊಳಿಸಲು ಕೂಡ ಕಾನೂನಿನಲ್ಲಿ ಅವಕಾಶ ಇಲ್ಲ ಎಂದು ಸ್ಪಷ್ಟನೆ ನೀಡಿದರು.
ವ್ಯಾಪಾರಿಗಳು ಮೊದಲು ನೋಂದಾಣಿ ಮಾಡಿಕೊಂಡು ತೆರಿಗೆಗಳನ್ನು ಪಾವತಿಸಬೇಕು. ವ್ಯಾಪಾರಿಗಳು ತಮ್ಮ ವಾರ್ಷಿಕ ಒಟ್ಟು ವಹಿವಾಟು 20 ಲಕ್ಷ ರೂ.ಗಿಂತ ಮೇಲಿದ್ದರೆ ನೋಂದಾಣಿ ಮಾಡಿಕೊಳ್ಳಬೇಕು. ಅದರಲ್ಲಿಯೂ ತೆರಿಗೆ ಪಾವತಿಸುವಂತಹ ಉದ್ಯಮಗಳಾದರೇ ಮಾತ್ರ ನೋಂದಾವಣಿ ಮಾಡಿಕೊಳ್ಳ ಬೇಕಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.
ವೇದಿಕೆಯಲ್ಲಿ ಲೆಕ್ಕ ಪರಿಶೋಧಕರ ಸಂಘದ ಉಡುಪಿ ಶಾಖೆಯ ಅಧ್ಯಕ್ಷೆ ಅರ್ಚನಾ ಮಯ್ಯ, ಉಡುಪಿ ಜಿಲ್ಲಾ ವರ್ತಕರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಆನಂದ ಕಾರ್ನಾಡ್, ಕಾರ್ಯದರ್ಶಿ ಓಸ್ವಾಲ್ಡ್ ಸಲ್ದಾನ, ಲೋಕ್ಕಪರಿಶೋಧಕ ರಾಘವೇಂದ್ರ ಉಪಸ್ಥಿತರಿದ್ದರು.
ವೇದಿಕೆಯ ಮಟ್ಟಾರು ಗಣೇಶ್ ಕಿಣಿ ಸ್ವಾಗತಿಸಿದರು. ಸಿಎ ಲಕ್ಷ್ಮೀಶ ರಾವ್ ಕಾರ್ಯಕ್ರಮ ನಿರೂಪಿಸಿದರು.







