ನ.8ರಂದು ನಿಟ್ಟೆ ಕ್ಯಾಂಪಸ್ ಘಟಿಕೋತ್ಸವದಲ್ಲಿ 646 ಮಂದಿಗೆ ಪದವಿ ಪ್ರದಾನ

ಉಡುಪಿ: ನಿಟ್ಟೆ ವಿಶ್ವವಿದ್ಯಾನಿಲಯವು ತನ್ನ ಮಂಗಳೂರು ಹಾಗೂ ನಿಟ್ಟೆ ಕ್ಯಾಂಪಸ್‌ಗಳಲ್ಲಿ 15ನೇ ಘಟಿಕೋತ್ಸವವನ್ನು ಕ್ರಮವಾಗಿ ನ.7 ಹಾಗೂ 8ರಂದು ನಡೆಸಲಿದ್ದು, ಒಟ್ಟಾರೆಯಾಗಿ 1,999 ಪದವೀಧರರು ವಿವಿಧ ಪದವಿಗಳನ್ನು ಸ್ವೀಕರಿಸಲಿದ್ದಾರೆ ಎಂದು ನಿಟ್ಟೆ ವಿವಿ ಉಪಕುಲಪತಿ ಡಾ.ಎಂ.ಎಸ್.ಮೂಡಿತ್ತಾಯ ತಿಳಿಸಿದ್ದಾರೆ.
ಉಡುಪಿ ಪ್ರೆಸ್ ಕ್ಲಬ್‌ನಲ್ಲಿ ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಿಟ್ಟೆಯ ಎನ್‌ಎಂಎಎಂಐಟಿಯ ಸದಾನಂದ ಅಡಿಟೋರಿಯಂನಲ್ಲಿ ನ.8ರ ಶನಿವಾರ ಬೆಳಗ್ಗೆ 10:30ಕ್ಕೆ ನಡೆಯುವ ಘಟಿಕೋತ್ಸವದಲ್ಲಿ 646 ಮಂದಿ ಕಂಪ್ಯೂಟರ್ ಅಪ್ಲಿಕೇಷನ್, ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ, ವ್ಯವಹಾರ ಆಡಳಿತ, ವಾಣಿಜ್ಯ ಮತ್ತು ನಿರ್ವಹಣೆ ನಿಕಾಯಗಳಲ್ಲಿ ಪದವಿಯನ್ನು ಸ್ವೀಕರಿಸಲಿದ್ದಾರೆ ಎಂದರು.
ಮಂಗಳೂರಿನ ದೇರಳಕಟ್ಟೆ ಕ್ಯಾಂಪಸ್‌ನಲ್ಲಿ ನ.7ರಂದು 1353 ಮಂದಿ ಪದವಿ ಸ್ವೀಕರಿಸಲಿದ್ದು, ಒಟ್ಟಾರೆಯಲ್ಲಿ 1999 ಮಂದಿಯಲ್ಲಿ 31 ಮಂದಿ ಡಾಕ್ಟೋರಲ್ ಪದವಿ, 907 ಮಂದಿ ಸ್ನಾತಕೋತ್ತರ ಪದವಿ, 1054 ಮಂದಿ ಸ್ನಾತಕ ಪದವಿ, ಐವರು ಫೆಲೋಶಿಪ್ ಹಾಗೂ ಇಬ್ಬರಿಗೆ ಸ್ನಾತಕೋತ್ತರ ಡಿಪ್ಲೊಮಾ ಪದವಿ ಪ್ರದಾನ ಮಾಡಲಾಗುತ್ತದೆ. 26 ಚಿನ್ನದ ಪದಕ ಹಾಗೂ 26 ದತ್ತಿ ಚಿನ್ನದ ಪದಕಗಳು ಸೇರಿದಂತೆ ಒಟ್ಟು 51 ಚಿನ್ನದ ಪದಕಗಳನ್ನು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರದಾನ ಮಾಡಲಾಗುತ್ತದೆ ಎಂದು ಡಾ.ಮೂಡಿತ್ತಾಯ ತಿಳಿಸಿದರು.
ನಿಟ್ಟೆಯಲ್ಲಿ ನಡೆಯುವ ಘಟಿಕೋತ್ಸವದ ಅಧ್ಯಕ್ಷತೆಯನ್ನು ಕುಲಾಧಿಪತಿ ಗಳಾದ ಎನ್.ವಿನಯ ಹೆಗ್ಡೆ ವಹಿಸಲಿದ್ದು, ಕೇರಳ ಕೇಂದ್ರೀಯ ವಿವಿಯ ಕುಲಪತಿ ಹಾಗೂ ಖ್ಯಾತ ಶಿಕ್ಷಣ ತಜ್ಞ ಪ್ರೊ.ಡಾ.ಸಿದ್ಧು ಪಿ.ಅಲ್ಗೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ವಿವಿಯ ಪ್ರೊ ಚಾನ್ಸಲರ್ ಡಾ.ಎಂ.ಶಾಂತರಾಮ ಶೆಟ್ಟಿ ಹಾಗೂ ಪ್ರೊ ಚಾನ್ಸಲರ್ ವಿಶಾಲ್ ಹೆಗ್ಡೆ ಉಪಸ್ಥಿತರಿರುವರು.
ನಿಟ್ಟೆ, ಮಂಗಳೂರು ಕ್ಯಾಂಪಸ್ ಬಳಿಕ ಇದೀಗ ಬೆಂಗಳೂರು ಕ್ಯಾಂಪಸ್‌ನ ಎಲ್ಲಾ ವಿದ್ಯಾಸಂಸ್ಥೆಗಳು ನಿಟ್ಟೆ ವಿವಿ ವ್ಯಾಪ್ತಿಗೆ ಸೇರ್ಪಡೆಗೊಂಡಿವೆ. ಈ ಮೂಲಕ ನಿಟ್ಟೆ ಶಿಕ್ಷಣ ಟ್ರಸ್ಟ್‌ನ ಮೂರು ಕ್ಯಾಂಪಸ್‌ಗಳಲ್ಲಿ ಒಟ್ಟಾರೆಯಾಗಿ 36 ಶಿಕ್ಷಣ ಸಂಸ್ಥೆಗಳು ಇದ್ದು, 29,000ಕ್ಕೂ ಅಧಿಕ ವಿದ್ಯಾಥಿಗಳು ವ್ಯಾಸಂಗ ಮಾಡುತಿದ್ದಾರೆ ಎಂದರು.
ಸುದ್ಧಿಗೋಷ್ಠಿಯಲ್ಲಿ ರಿಜಿಸ್ಟ್ರಾರ್ ಪ್ರೊ.ಡಾ.ಹರ್ಷ ಹಾಲಹಳ್ಳಿ, ಪರೀಕ್ಷಾ ನಿಯಂತ್ರಕ ಡಾ.ಪ್ರಸಾದ್ ಬಿ.ಶೆಟ್ಟಿ, ಎನ್‌ಎಂಎಎಂಐಟಿ ನಿರ್ದೇಶಕ ಡಾ.ನಿರಂಜನ ಚಿಪ್ಳೂಣಕರ್, ಡಾ.ಕೆ.ಎಸ್.ಹೆಗ್ಡೆ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕ ಡಾ.ಸುಧೀರ್ ಎಂ. ಉಪಸ್ಥಿತರಿದ್ದರು.







