ಯುಪಿಎಸ್ಸಿ-2022ರ ಕಾಯ್ದಿರಿಸಿದ ಪಟ್ಟಿಯಲ್ಲಿದ್ದ ಉಡುಪಿಯ ನಿವೇದಿತಾ ಶೆಟ್ಟಿಗೆ ಗ್ರೂಪ್-ಎ ಹುದ್ದೆಯ ನಿರೀಕ್ಷೆ
ಕೋಚಿಂಗ್ ಇಲ್ಲದೇ ಸ್ವಪ್ರಯತ್ನದಲ್ಲೇ ಯುಪಿಎಸ್ಸಿ ತೇರ್ಗಡೆ

ನಿವೇದಿತಾ ಶೆಟ್ಟಿ
ಉಡುಪಿ, ನ.2: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ವಿವಿಧ ನಾಗರಿಕ ಸೇವಾ ಹುದ್ದೆಗಳಿಗೆ ನಿನ್ನೆ ಬಿಡುಗಡೆಗೊಳಿಸಿದ ಯುಪಿಎಸ್ಸಿ-2022ರ ಕಾಯ್ದಿರಿಸಿದ ಪಟ್ಟಿಯಲ್ಲಿದ್ದ 89 ಅಭ್ಯರ್ಥಿಗಳಲ್ಲಿ ಉಡುಪಿಯ ನಿವೇದಿತಾ ಶೆಟ್ಟಿ ಅವರೂ ಒಬ್ಬರಾಗಿದ್ದು, ಕೇಂದ್ರ ಸೇವೆಯ ಗ್ರೂಪ್ ‘ಎ’ ಹುದ್ದೆಯನ್ನು ಪಡೆಯುವ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದಾರೆ.
ಪತಿ ಹಾಗೂ ಮೂರು ವರ್ಷದ ಮಗಳೊಂದಿಗೆ ಈಗ ಒಮನ್ನಲ್ಲಿರುವ ನಿವೇದಿತಾ ಶೆಟ್ಟಿ ಅವರು ‘ವಾರ್ತಾಭಾರತಿ’ ಯೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಕಳೆದ ಮೇ ತಿಂಗಳಲ್ಲಿ ಪ್ರಕಟವಾದ ಯುಪಿಸಿಎಸ್ ಮೆರಿಟ್ ಲಿಸ್ಟಿನ 933 ಅಭ್ಯರ್ಥಿಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲು ಕೇವಲ ಒಂದು ಅಂಕದಿಂದ ವಿಫಲವಾದ ನಿರಾಶೆ ಇದರಿಂದ ದೂರವಾಗಿದೆ ಎಂದರು.
‘ಯುಪಿಎಸ್ಸಿ ನಿನ್ನೆ ಪ್ರಕಟಿಸಿದ 89 ಅಭ್ಯರ್ಥಿಗಳ ಮೀಸಲು ಪಟ್ಟಿಯಲ್ಲಿ ಐದನೇ ಸ್ಥಾನ ಹೊಂದಿರುವುದನ್ನು ತಿಳಿದು ತುಂಬಾ ತುಂಬಾ ಖುಷಿಯಾಗಿದೆ. ಇದರಿಂದ ಮೇ ತಿಂಗಳಲ್ಲಾದ ನಿರಾಶೆ ಕಳೆದು ನಿರಾಳತೆ ಉಂಟಾಗಿದೆ. ತಂದೆ-ತಾಯಿ, ಪತಿ ಅವರ ಪ್ರೋತ್ಸಾಹ ಹಾಗೂ ಬೆಂಬಲದಿಂದ ಇದು ಸಾಧ್ಯವಾಗಿದೆ. ಜನವರಿಯಿಂದ ಪ್ರಾರಂಭಗೊಳ್ಳುವ ತರಬೇತಿ ಯನ್ನು ಎದುರು ನೋಡುತಿದ್ದೇನೆ. ನನಗೆ ದೊರೆಯುವ ಯಾವುದೇ ಹುದ್ದೆಯನ್ನು ಹೊಂದಲು ಬಯಸುತ್ತೇನೆ.’ ಎಂದರು.
ನಿವೇದಿತಾ ಶೆಟ್ಟಿ ಅವರ ತಂದೆ ಸದಾನಂದ ಶೆಟ್ಟಿ ಪೆರ್ಡೂರು ಹಾಗೂ ತಾಯಿ ಸಮಿತ ಶೆಟ್ಟಿ ಉಡುಪಿಯವರು. ತಂದೆ ಅಂಬಾಗಿಲಿನಲ್ಲಿದ್ದ ಭಾರತ ಟೈಲ್ಸ್ನಲ್ಲಿ ನೌಕರಿಯಲ್ಲಿದ್ದು ನಿವೃತ್ತರಾಗಿದ್ದಾರೆ. ಇವರ ಪ್ರಾರಂಭಿಕ ವಿದ್ಯಾಭ್ಯಾಸ ನಡೆದಿದ್ದು ಕಲ್ಯಾಣಪುರದ ಮಿಲಾಗ್ರಿಸ್ ಸಂಸ್ಥೆಯಲ್ಲಿ. ಪಿಯುಸಿಯನ್ನು ಉಡುಪಿ ವಿದ್ಯೋದಯದಲ್ಲಿ ಮುಗಿಸಿದ ಅವರು ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸಾಯನ್ಸ್ನಲ್ಲಿ ಪದವಿ ಪಡೆದಿದ್ದಾರೆ.
ಕೊನೆಯ ವರ್ಷದ ಇಂಜಿನಿಯರಿಂಗ್ನಲ್ಲಿದ್ದಾಗ ನಡೆದ ಕ್ಯಾಂಪಸ್ ಇಂಟರ್ ವ್ಯೂವ್ ನಲ್ಲಿ ನಿವೇದಿತ ಕಾಲೇಜಿನಲ್ಲೇ ಅತ್ಯಧಿಕ ಮೊತ್ತದ ವೇತನದ ಹುದ್ದೆಗೆ ಆಯ್ಕೆಯಾಗಿದ್ದರು. ಬೆಂಗಳೂರಿನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ದುಡಿಯುವಾಗಲೇ ನಾಗರಿಕ ಸೇವಾ ಪರೀಕ್ಷೆ ಬರೆಯಲು ಸಿದ್ಧತೆ ನಡೆಸಿದ್ದ ಅವರು ತಮ್ಮ ಬಿಡುವಿನ ಸಮಯವನ್ನು ಸಂಪೂರ್ಣ ತಯಾರಿಗೆ ಮೀಸಲಿಟ್ಟಿದ್ದರು.
ಯಾವುದೇ ಕೋಚಿಂಗ್, ತರಬೇತಿಯ ಸಹಾಯವಿಲ್ಲದೇ ಸ್ವಪ್ರಯತ್ನದಲ್ಲಿ ಯುಪಿಎಸ್ಸಿ ಪರೀಕ್ಷೆಗೆ ಮುಂದಾದ ನಿವೇದಿತಾರಿಗೆ ಕಂಪೆನಿ ಕೆಲಸ ನಿರ್ವಹಣೆ ಮಧ್ಯೆ ಪರೀಕ್ಷೆ ತಯಾರಿ ಸಮರ್ಪಕ ರೀತಿಯಲ್ಲಿ, ನಿರೀಕ್ಷಿತ ಮಟ್ಟದಲ್ಲಿ ಸಾಧ್ಯವಾಗದ ಕಾರಣ ಕೆಲಸಕ್ಕೆ ರಾಜಿನಾಮೆ ನೀಡಿದರು.
ಈ ಮಧ್ಯೆ ಅವರು ಒಮನ್ ಸರಕಾರಿ ಟೆಕ್ನಿಕಲ್ ಯೂನಿವರ್ಸಿಟಿಯಲ್ಲಿ ಪ್ರಾಧ್ಯಾಪಕರಾಗಿರುವ ದಿವಾಕರ ಶೆಟ್ಟಿ ಅವರನ್ನು ಮದುವೆಯಾಗಿ ಮಗುವಿನ ತಾಯಿಯೂ ಆದರು. ತಾಯಿ ಮನೆಯಲ್ಲಿದ್ದು ಪರೀಕ್ಷೆಗೆ ಸಿದ್ಧತೆ ನಡೆಸಿದ ನಿವೇದಿತಾ, 2022ರ ಮೇ ತಿಂಗಳಲ್ಲಿ ಪ್ರಕಟವಾದ ಯುಪಿಎಸ್ಸಿ ಅಂತಿಮ ಫಲಿತಾಂಶದಲ್ಲಿ ಕೇವಲ ಒಂದು ಅಂಕದಿಂದ 933 ಅಭ್ಯರ್ಥಿಗಳ ಮೆರಿಟ್ ಪಟ್ಟಿಯಲ್ಲಿ ಸ್ಥಾನ ಪಡೆಯಲು ವಿಫಲವಾದರೂ, ರಿಸರ್ವ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ಯುಪಿಎಸ್ಸಿ ವಿವಿಧ ನಾಗರಿಕ ಸೇವೆಗಳಿಗೆ ನಿನ್ನೆ ಶಿಫಾರಸು ಮಾಡಿದ ಇನ್ನೂ 89 ಅಭ್ಯರ್ಥಿಗಳ ಪಟ್ಟಿಯಲ್ಲಿ ಅವರು ಸ್ಥಾನ ಪಡೆದರು.
ಯುಪಿಎಸ್ಸಿ ಪರೀಕ್ಷೆ ಎಂಬುದು ಕಬ್ಬಿಣದ ಕಡಲೆಯಲ್ಲ. ಸಾಧಿಸುವ ಮನಸ್ಸಿದ್ದರೆ, ಸಾಧಿಸಬೇಕೆಂಬ ಛಲವಿದ್ದರೆ, ಮಹಿಳೆ ಸಹ ಕಠಿಣ ಪರಿಶ್ರಮ ದಿಂದ ಏನನ್ನಾದರೂ ಸಾಧಿಸಬಲ್ಲಳು ಎಂಬುದಕ್ಕೆ ನಿವೇದಿತ ಶೆಟ್ಟಿ ಉದಾಹರಣೆಯಾಗಿದ್ದಾರೆ. ಕೇವಲ ಗೆಲ್ಲಬೇಕೆಂಬ ಛಲವೊಂದರಿಂದಲೇ ಅವರು ಮದುವೆ ಹಾಗೂ ಮಗುವಿನ ತಾಯಿಯಾದ ಬಳಿಕವೂ ಯಾವುದೇ ಕೋಚಿಂಗ್ ಇಲ್ಲದೇ ಯುಪಿಎಸ್ಸಿ ಪರೀಕ್ಷೆಯಲ್ಲಿ ಯಶಸ್ಸು ಪಡೆದಿರುವದೇ ಸಾಕ್ಷಿ.
ಯುಪಿಎಸ್ಸಿ ಒಟ್ಟು 1022 ಮಂದಿಯ ಪಟ್ಟಿಯನ್ನು ತಯಾರಿಸಿ ಐಎಎಸ್, ಐಪಿಎಸ್, ಎಎಫ್ಎಸ್ ಸೇರಿದಂತೆ ಇತರ ಕೆಲವು ಕೇಂದ್ರ ಸೇವೆಗೆ ಮೊದಲ ಪಟ್ಟಿಯಲ್ಲಿ 933 ಮಂದಿಯ ಹೆಸರನ್ನು ಪ್ರಕಟಿಸಿತ್ತು. ಇದೀಗ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಕೋರಿಕೆಯ ಮೇರೆಗೆ ಆಯೋಗ ಹೆಚ್ಚುವರಿಯಾಗಿ 89 ಅಭ್ಯರ್ಥಿಗಳ ಹೆಸರನ್ನು ವಿವಿಧ ಹುದ್ದೆಗಳಿಗೆ ಶಿಫಾರಸು ಮಾಡಿದೆ. ಇವರು ತರಬೇತಿಯ ಬಳಿಕ ಖಾಲಿ ಇರುವ ಗ್ರೂಪ್ ಎ ಹಾಗೂ ಗ್ರೂಪ್ ಬಿ ಹುದ್ದೆಗಳಿಗೆ ಆಯ್ಕೆಯಾಗಲಿದ್ದಾರೆ.
ಇವರಲ್ಲಿ 65ಮಂದಿ ಸಾಮಾನ್ಯ ವರ್ಗದ ಅಭ್ಯರ್ಥಿಗಳಾದರೆ, ಆರ್ಥಿಕವಾಗಿ ಹಿಂದುಳಿದ (ಇಡಬ್ಲ್ಯುಎಸ್) 7, ಹಿಂದುಳಿದ ವರ್ಗಗಳ (ಒಬಿಸಿ) 15, ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದ ತಲಾ ಒಬ್ಬ ಅಭ್ಯರ್ಥಿ ಗಳಿದ್ದಾರೆ ಎಂದು ಯುಪಿಎಸ್ಸಿ ಪ್ರಕಟಿಸಿದೆ.







