ಕ್ಷೇತ್ರ ಪುನರ್ ವಿಂಗಡನೆಯಿಂದ ದಕ್ಷಿಣ ಭಾರತಕ್ಕೆ ಅನ್ಯಾಯವಾಗದು: ಎಚ್.ಡಿ.ಕುಮಾರಸ್ವಾಮಿ

ಉಡುಪಿ, ನ.29: ಕ್ಷೇತ್ರ ಪುನರ್ ವಿಂಗಡನೆಯಿಂದ ದಕ್ಷಿಣ ಭಾರತಕ್ಕೆ ಲಾಭ ಆಗುತ್ತದೆಯೇ ಹೊರತು ಯಾವುದೇ ರೀತಿಯಲ್ಲೂ ಅನ್ಯಾಯ ಆಗುವುದಿಲ್ಲ. ಇದರಿಂದ ದಕ್ಷಿಣ ರಾಜ್ಯಗಳ ಸಂಸದರ ಸಂಖ್ಯೆ ಹೆಚ್ಚುವುದರಿಂದ ಕೇಂದ್ರದೊಂದಿಗೆ ಆರ್ಥಿಕ ಹಂಚಿಕೆ ಕುರಿತು ಚರ್ಚಿಸಲು ಬಲ ಸಿಗುತ್ತದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಸೋದೆ ವಾದಿರಾಜ ಮಠದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ರವಿವಾರ ಉಡುಪಿಗೆ ಆಗಮಿಸಿದ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರ ಪುನರ್ ವಿಂಗಡನೆ ಕುರಿತು ಕಾಂಗ್ರೆಸ್ ನಡೆಸುತ್ತಿರುವ ಸಭೆಗಳಿಗೆ ಅರ್ಥವಿಲ್ಲ. ಜನಸಂಖ್ಯೆ ಆಧಾರದ ಬದಲು ಎಲ್ಲಾ ರಾಜ್ಯಗಳಲ್ಲಿ ಏಕರೂಪವಾಗಿ ಶೇ.50ರಷ್ಟು ಕ್ಷೇತ್ರಗಳನ್ನು ಹೆಚ್ಚಿಸುವುದರಿಂದ ಕರ್ನಾಟಕದ ಲೋಕಸಭಾ ಸ್ಥಾನಗಳು 28ರಿಂದ 42ಕ್ಕೆ, ತಮಿಳುನಾಡು 39ರಿಂದ 59ಕ್ಕೆ, ಕೇರಳ 20ರಿಂದ 30ಕ್ಕೆ ಹಾಗೂ ತೆಲಂಗಾಣ 9ರಿಂದ 14-15ಕ್ಕೆ ಏರಿಕೆಯಾಗಲಿದೆ. ಇದರಿಂದ 26-28 ಲಕ್ಷ ಮತದಾರರಿರುವ ಕ್ಷೇತ್ರಗಳು 12-13 ಲಕ್ಷಕ್ಕೆ ಇಳಿಕೆಯಾಗಿ ಜನಪ್ರತಿನಿಧಿಗಳಿಗೆ ಕೆಲಸ ಮಾಡಲು ಅನುಕೂಲವಾಗುತ್ತದೆ ಎಂದರು.
ಸಿಎಂ ಭೂಮಿ ವ್ಯಾಮೋಹ: ಮುಖ್ಯಮಂತ್ರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಚಿವ ಸಂಪುಟ ಸಭೆ ನಡೆಸಿ, ಕರಾವಳಿಗೆ 32 ಸಾವಿರ ಕೋಟಿ ರೂ. ಕಾರ್ಯಕ್ರಮಗಳನ್ನು ಘೋಷಿಸಿ ಹಲವು ತಿಂಗಳು ಕಳೆದರೂ ಎಷ್ಟು ಕಾರ್ಯಕ್ರಮಗಳು ಅನುಷ್ಠಾನವಾಗಿವೆ ಎಂಬುದು ಯಾರಿಗೂ ತಿಳಿದಿಲ್ಲ. ಇವರ ಭೂಮಿಯ ವ್ಯಾಮೋಹ ಕೇವಲ ಬೆಂಗಳೂರು ಸುತ್ತಮುತ್ತಕ್ಕೆ ಮಾತ್ರ ಸೀಮಿತವಾಗಿರದೆ ಈಗ ಕರಾವಳಿಗೂ ವಿಸ್ತರಿಸಿದೆ ಎಂದು ಕುಮಾರಸ್ವಾಮಿ ಟೀಕಿಸಿದರು.
ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ 15 ಸಾವಿರ ರೂ. ಗೌರವಧನದ ಭರವಸೆ ಈಡೇರಿಸುವಂತೆ ಒತ್ತಾಯಿಸಿ ಆಶಾ ಕಾರ್ಯಕರ್ತರು ಕಳೆದ 15 ದಿನಗಳಿಂದ ಧರಣಿ ನಡೆಸುತ್ತಿದ್ದಾರೆ. ಅವರನ್ನು ಕರೆದು ಮನವೊಲಿಸುವ ಕನಿಷ್ಠ ಸೌಜನ್ಯವೂ ಮುಖ್ಯಮಂತ್ರಿ ಹಾಗೂ ಮಂತ್ರಿಗಳಿಗಿಲ್ಲ. ಭಾರತ್ ಜೋಡೋ ಹೆಸರಿನಲ್ಲಿ ತೆರಿಗೆದಾರರ 1,000 ಕೋಟಿ ರೂ.ವನ್ನು ಸ್ವೇಚ್ಛಾಚಾರವಾಗಿ ಕಾರ್ಯಕರ್ತರಿಗೆ ಹಂಚುವ ಸರಕಾರಕ್ಕೆ 41 ಸಾವಿರ ಆಶಾ ಕಾರ್ಯಕರ್ತರಿಗೆ ತಲಾ 5ಸಾವಿರ ರೂ. ನೀಡಲು ಬೇಕಾಗುವ ಕೇವಲ 350 ಕೋಟಿ ರೂ. ದೊಡ್ಡ ಹೊರೆಯಾಗುವುದಿಲ್ಲ ಎಂದರು.
ಐದು ಗ್ಯಾರಂಟಿಗಳ ಹೆಸರಿನಲ್ಲಿ ಜನರ ಮೇಲೆ ತೆರಿಗೆ ಹೊರೆ ಹೇರಿರುವ ಸರಕಾರ, 2026-27ನೇ ಸಾಲಿಗೆ 1.32 ಲಕ್ಷ ಕೋಟಿ ರೂ. ಸಾಲ ಮಾಡಲು ಹೊರಟಿದೆ. ಬರಗಾಲದ ಪರಿಹಾರವಾಗಿ 2,500 ರೂ. ಘೋಷಿಸಿ ಕೇವಲ 500-1,000 ರೂ. ನೀಡಿದ್ದಾರೆ. ಹಳೆಯ ಗುತ್ತಿಗೆದಾರರ ಬಿಲ್ ಪಾವತಿಸಲಾಗದ ಇವರು, ಹಳ್ಳಿ ರಸ್ತೆಗಳಿಗೆ 16 ಸಾವಿರ ಕೋಟಿ ರೂ. ಘೋಷಿಸಿದ್ದಾರೆ. ಇವರ ಬಳಿ ಹಣ ಎಲ್ಲಿದೆ? ಎಂದು ಅವರು ಪ್ರಶ್ನಿಸಿದರು.
ಹಸು ನೀಡುವ ಯೋಜನೆ: ಗ್ಯಾರಂಟಿ ಯೋಜನೆಗಳು ಕೇವಲ ಆದಾಯ ಖರ್ಚು ಆಗುತ್ತವೆ. ಅದರ ಬದಲು ದಿನಕ್ಕೆ 20 ಲೀಟರ್ ಹಾಲು ಕೊಡುವ ಹಸು ನೀಡಿದರೆ ಖರ್ಚು ಕಳೆದು ತಿಂಗಳಿಗೆ 30 ಸಾವಿರ ರೂ. ಉಳಿಸಬಹುದು. ಇದರಿಂದ ಕುಟುಂಬಗಳು ಸ್ವಾಭಿಮಾನದಿಂದ ಬದುಕುವ ಜೊತೆಗೆ ಕ್ಯಾಪಿಟಲ್ ಅಸೆಟ್ ಸೃಷ್ಟಿಯಾಗುತ್ತದೆ. ನಗರ ಹಾಗೂ ಗ್ರಾಮೀಣ ಭಾಗಗಳಿಗೆ ಮುಂದಿನ 15-20 ವರ್ಷಗಳ ದೂರದೃಷ್ಟಿಯ ಯೋಜನೆಯನ್ನು ಸದ್ಯದಲ್ಲೇ ಘೋಷಿಸಲಾಗುವುದು ಎಂದು ಕುಮಾರಸ್ವಾಮಿ ತಿಳಿಸಿದರು.
ಕೆಐಎಡಿಬಿ ಹೆಸರಿನಲ್ಲಿ ಕೃಷಿಕರನ್ನು ಒಕ್ಕಲೆಬ್ಬಿಸುತ್ತಿರುವ ವಿಚಾರ ನಿನ್ನೆ ಗಮನಕ್ಕೆ ಬಂದಿದ್ದು, ದಾಖಲೆಗಳನ್ನು ಪರಿಶೀಲಿಸಿ ರೈತರ ಪರವಾಗಿ ಧ್ವನಿ ಎತ್ತಲಾಗುವುದು ಎಂದು ಕುಮಾಸ್ವಾಮಿ ಭರವಸೆ ನೀಡಿದರು.
ಕರ್ನಾಟಕವನ್ನು ಜಪಾನ್ ಮಾದರಿಯಲ್ಲಿ ಅಭಿವೃದ್ಧಿ ಮಾಡುವುದಾಗಿ ಹೇಳುವ ಸಿಎಂ ಅವರ ಅವಧಿಯಲ್ಲಿ ಜಪಾನ್ ಮೂಲದ ಟೊಯೋಟಾ ಕಂಪನಿ ಇಲ್ಲಿ ಹೂಡಿಕೆ ಮಾಡಲಾಗದೆ ಮಹಾರಾಷ್ಟ್ರದಲ್ಲಿ 25 ಸಾವಿರ ಕೋಟಿ ರೂ. ಹೂಡಿಕೆ ಮಾಡುತ್ತಿದೆ ಎಂದು ಅವರು ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ಸಾರಾ ಮಹೇಶ್, ಯೋಗೀಶ್ ಶೆಟ್ಟಿ, ವಾಸುದೇವ ರಾವ್, ಜಯರಾಮ ಆಚಾರ್ಯ, ರಮೇಶ್ ಕುಂದಾಪುರ, ಜಯಕುಮಾರ್ ಪರ್ಕಳ, ಶಾಲಿನಿ ಶೆಟ್ಟಿ ಕೆಂಚನೂರು, ಮನ್ಸೂರ್ ಇಬ್ರಾಹೀಂ ಉಪಸ್ಥಿತರಿದ್ದರು.
ಕೇಂದ್ರ ಸರಕಾರವನ್ನು ದೂಷಿಸುವ ಚಾಳಿ
ಪ್ರತಿಯೊಂದಕ್ಕೂ ಕೇಂದ್ರ ಸರಕಾರವನ್ನು ದೂಷಿಸುವ ಚಾಳಿ ಬೆಳೆಸಿಕೊಂಡಿರುವ ಇವರಿಗೆ ದಿಲ್ಲಿಗೆ ಹೋಗಿ ಕೆಲಸ ಮಾಡಿಸಿಕೊಳ್ಳುವ ತಿಳುವಳಿಕೆ ಇಲ್ಲ. ಕಂದಾಯ ಸಚಿವರು ಬೆಂಗಳೂರಿನಲ್ಲಿ ಕೂತು ಪತ್ರ ಬರೆದು ಮಾಧ್ಯಮಗಳಿಗೆ ಬಿಡುಗಡೆ ಮಾಡಿದರೆ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಎಚ್.ಡಿ. ಕುಮಾರಸ್ವಾಮಿ ಟೀಕಿಸಿದರು.
ಕೇವಲ ಪಶು ವೈದ್ಯಾಧಿಕಾರಿಗಳ ನೇಮಕಾತಿ ಅಷ್ಟೇ ಅಲ್ಲ, ಕಳೆದ ಮೂರು ನಾಲ್ಕು ವರ್ಷಗಳಲ್ಲಿ ಹಲವು ಇಲಾಖೆಗಳಲ್ಲಿ ಅಕ್ರಮ ನಡೆದಿದೆ. ಈ ಕುರಿತು ಹೈಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದ್ದು, ಇಡಿ ಕೂಡ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದೆ. ಆದರೂ ಪ್ರಕರಣವನ್ನು ಎಸ್ಐಟಿ ತನಿಖೆಗೆ ವಹಿಸುವ ನೈತಿಕತೆ ಹಾಗೂ ಧೈರ್ಯ ಈ ಸರಕಾರಕ್ಕಿಲ್ಲ ಎಂದು ಅವರು ಆರೋಪಿಸಿದರು.
‘ಕಾಂಗ್ರೆಸ್ ನಲ್ಲಿ ಎರಡಲ್ಲ, ಹಲವು ಒಡಕುಗಳಿದ್ದು, ಯಾವಾಗ ಸ್ಫೋಟವಾಗುತ್ತದೆ ಎಂದು ಕಾದು ನೋಡಬೇಕಾಗಿದೆ. ಬೇರೆ ಪಕ್ಷಗಳನ್ನು ನಾಶ ಮಾಡಲು ಹೊರಟವರಿಗೆ ಅವರ ಟಾರ್ಗೆಟ್ ಅವರಿಗೇ ಮುಳುವಾಗಲಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ನ ದೌರ್ಜನ್ಯದ ರಾಜಕಾರಣವನ್ನು ಮೆಟ್ಟಿ ನಿಲ್ಲಲು ಜೆಡಿಎಸ್-ಬಿಜೆಪಿ ಮೈತ್ರಿಕೂಟದಿಂದ ಗೆಲ್ಲುವ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದು’
-ಕುಮಾರಸ್ವಾಮಿ, ಕೇಂದ್ರ ಸಚಿವ






