ವಿಕಲಚೇತನರ ಬಸ್ ಪಾಸ್ ನವೀಕರಣಕ್ಕೆ ಸೂಚನೆ

ಉಡುಪಿ, ಡಿ.31: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮಂಗಳೂರು ವಿಭಾಗದಿಂದ ಸಕಾಲ ಸಂಬಂಧಿತ ಸೇವೆಯಾದ ವಿಕಲಚೇತನರ ರಿಯಾಯಿತಿ ದರದ ಬಸ್‌ಪಾಸನ್ನು ಸೇವಾಸಿಂಧು ಪೋರ್ಟಲ್ ಮುಖಾಂತರ ನಿರ್ವಹಿಸಲಾಗುತ್ತಿದ್ದು, ವಿಕಲಚೇತನ ಪ್ರಯಾಣಿಕರಿಗೆ ತಮ್ಮ ವಾಸಸ್ಥಳದಿಂದ 100 ಕಿ.ಮೀ. ವ್ಯಾಪ್ತಿಯಲ್ಲಿ ಪ್ರಯಾಣಿಸಲು ರಿಯಾಯಿತಿ ದರದಲ್ಲಿ ಬಸ್ಸು ಪಾಸುಗಳನ್ನು ವಿತರಿಸಲಾಗುತ್ತಿದೆ.
2025ನೇ ಸಾಲಿನಲ್ಲಿ ವಿತರಿಸಿರುವ ಸದ್ರಿ ರಿಯಾಯಿತಿ ಬಸ್ ಪಾಸುಗಳ ಅವಧಿ ಡಿಸೆಂಬರ್ 31ಕ್ಕೆ ಮುಕ್ತಾಯಗೊಳ್ಳಲಿದ್ದು, 2026ನೇ ಸಾಲಿಗಾಗಿ ಈ ಬಸ್‌ಪಾಸುಗಳನ್ನು 2026ರ ಜನವರಿ 01ರಿಂದ ನವೀಕರಿಸಲು ಕ್ರಮ ಕೈಗೊಳ್ಳಲಾಗಿದೆ. ಶೀಘ್ರ ಹೊಸ ಪಾಸುಗಳನ್ನು ನೀಡಲಾಗುವುದು.
ವಿಕಲಚೇತನರ ರಿಯಾಯಿತಿ ದರದ ಬಸ್ ಪಾಸುಗಳನ್ನು ಫಲಾನುಭವಿಗಳು ಬಂದು ನವೀಕರಿಸಿಕೊಳ್ಳಲು ಅನುಕೂಲವಾಗುವಂತೆ 2025ನೇ ಸಾಲಿನಲ್ಲಿ ವಿತರಿಸಿದ ಪಾಸುಗಳನ್ನು 2026ರ ಫೆಬ್ರವರಿ 28ರವರೆಗೆ ಮಾನ್ಯ ಮಾಡಲಾಗುವುದು.ವಿಕಲಚೇತನರ ರಿಯಾಯಿತಿ ಪಾಸುಗಳನ್ನು ಪಡೆಯಲು ಸೇವಾಸಿಂಧು ಪೋರ್ಟಲ್ ಮೂಲಕ - https://sevasindhuservices.karnataka.gov.in-ನಲ್ಲಿ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ 1 ಸ್ಟಾಂಪ್ ಸೈಜಿನ ಮತ್ತು 2 ಪಾಸ್‌ಪೋರ್ಟ್ ಸೈಜಿನ ಇತ್ತೀಚಿನ ಭಾವಚಿತ್ರ, ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ವಿತರಿಸುವ ಗುರುತಿನ ಚೀಟಿಯ ಮೂಲ ಪ್ರತಿಯನ್ನು (ಮಾನ್ಯತಾ ಅವಧಿ ಮುಗಿದಿರಬಾರದು) ಅಥವಾ ವಿಕಲಚೇತನ ವ್ಯಕ್ತಿಗಳಿಗೆ ಹೊಸದಾಗಿ ನೀಡಲಾಗಿರುವ ಯುಡಿಐಡಿ ಕಾರ್ಡಿನ ಮೂಲಪ್ರತಿ ಹಾಗೂ ವಿಳಾಸದ ದೃಢೀಕರಣ ದಾಖಲಾತಿ (ಆಧಾರ್‌ಕಾರ್ಡ್) ಮೂಲಪ್ರತಿಯೊಂದಿಗೆ ಅರ್ಜಿ ಸಲ್ಲಿಸಬೇಕು.
ನಿಗಮದ ವಿಕಲಚೇತನರ ರಿಯಾಯಿತಿ ಬಸ್‌ಪಾಸನ್ನು ಪಡೆಯುವ ಫಲಾನುಭವಿಗಳು ಮೇಲ್ಕಂಡ ಸೂಕ್ತ ದಾಖಲೆಗಳನ್ನು ಜೆಪಿಇಜಿ ಹಾಗೂ ಪಿಡಿಎಫ್ ನಮೂನೆಯಲ್ಲಿ ಸೇವಾಸಿಂಧು ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಿ, ಸದರಿ ದಾಖಲೆಗಳ ಜೆರಾಕ್ಸ್ ಪ್ರತಿಗಳನ್ನು ಹಾಗೂ ಪಾಸ್‌ನ ಶುಲ್ಕ 660ರೂ.ವನ್ನು ನೀಡಿ ಪಾಸುಗಳನ್ನು ಪಡೆಯ ಬಹುದು. ಪಾಸುಗಳನ್ನು ನವೀಕರಿಸಲು ಫೆ.28 ಕೊನೆಯ ದಿನವಾಗಿದೆ ಎಂದು ಮಂಗಳೂರು ಕ.ರಾ.ರ.ಸಾ. ನಿಗಮದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.







