ನ.13: ಬೆಂಗಳೂರು - ಮಂಗಳೂರು - ಉಡುಪಿ - ಮಡಂಗಾವ್ ವಂದೇಭಾರತ್ ರೈಲಿಗೆ ಪ್ರಧಾನಿ ಮೋದಿ ಚಾಲನೆ

(File Photo)
ಉಡುಪಿ, ನ.10: ರಾಜ್ಯದ ರಾಜಧಾನಿ ಬೆಂಗಳೂರನ್ನು ಮಂಗಳೂರು, ಉಡುಪಿ, ಕಾರವಾರ ಮೂಲಕ ಮಡಂಗಾವ್ನ್ನು ಸಂಪರ್ಕಿಸುವ ಬಹುನಿರೀಕ್ಷಿತ ವಂದೇಭಾರತ್ ರೈಲಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನ.13ರಂದು ಬೆಂಗಳೂರಿನಲ್ಲಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಲಿದ್ದಾರೆ.
ಆಧುನಿಕ ಭಾರತದ ಆಧುನಿಕ ರೈಲು ಎಂಬ ಹೆಗ್ಗಳಿಕೆ ಹೊಂದಿರುವ ವಂದೇಭಾರತ್ ರೈಲು ಬೆಂಗಳೂರನ್ನು ಕರ್ನಾಟಕ ಕರಾವಳಿಯೊಂದಿಗೆ ಬೆಸೆಯಲಿದೆ. ಕಳೆದೊಂದು ವರ್ಷದಿಂದ ಮಡಂಗಾವ್ ಹಾಗೂ ಮಂಗಳೂರು ನಡುವೆ ಸಂಚರಿಸುತಿದ್ದ ಈ ರೈಲು ಇನ್ನು ಮುಂದೆ ಬೆಂಗಳೂರು ಹಾಗೂ ಮಡಂಗಾವ್ನ್ನು ಸಂಪರ್ಕಿಸಲಿದೆ.
ನ.13ರ ಶುಕ್ರವಾರ ಅಪರಾಹ್ನ 2 ಗಂಟೆಗೆ ಬೆಂಗಳೂರಿನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರು ಈ ರೈಲಿಗೆ ಚಾಲನೆ ನೀಡಲಿದ್ದಾರೆ ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಅದೇ ಸಮಯದಲ್ಲಿ ಮಂಗಳೂರು ಜಂಕ್ಷನ್ನಲ್ಲಿ ನಡೆಯುವ ಸರಳ ಸಮಾರಂಭದಲ್ಲಿ ಕರಾವಳಿಯಿಂದ ಬೆಂಗಳೂರು ಕಡೆ ಸಾಗುವ ವಂದೇ ಭಾರತ್ ರೈಲಿನ ಸಾಂಕೇತಿಕ ಉದ್ಘಾಟನೆಯೂ ನಡೆಯಲಿದ್ದು, ಕೇಂದ್ರ ರೈಲ್ವೇ ಸಚಿವ ಅಶ್ವಿನ್ ವೈಷ್ಣವ್, ಮಂಗಳೂರು, ಉಡುಪಿ, ಕಾರವಾರ ಸಂಸದರ ಜತೆ ಮಡಗಾಂವ್ - ಮಂಗಳೂರು - ಬೆಂಗಳೂರು ವಂದೇ ಭಾರತ್ ರೈಲನ್ನು ಉದ್ಘಾಟಿಸಲಿದ್ದಾರೆ.
ನ.13ರ ಉದ್ಘಾಟನೆಯ ಬಳಿಕ ಈ ರೈಲಿನ ನಿಯಮಿತ ಸೇವೆ ನವೆಂಬರ್ 15ರಿಂದ ಎರಡೂ ಕಡೆಯಿಂದ (ಬೆಂಗಳೂರು ಮತ್ತು ಮಡಗಾಂವ್) ಆರಂಭ ಗೊಳ್ಳಲಿದೆ ಎಂದು ಸಂಸದ ಕೋಟ ಹೇಳಿಕೆಯಲ್ಲಿ ತಿಳಿಸಿದ್ದು, ಕರಾವಳಿ ಭಾಗವನ್ನು ರಾಜಧಾನಿಯೊಂದಿಗೆ ಬೆಸೆಯುವ ವಂದೇ ಭಾರತ್ ರೈಲನ್ನು ಪ್ರಾರಂಭಿಸುತ್ತಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜ್ಯದ ವಿಶೇಷವಾಗಿ ಕರಾವಳಿಯ ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.
2019ರಲ್ಲಿ ಅಂದಿನ ರೈಲ್ವೇ ಸಚಿವ ಪಿಯೂಷ್ ಗೋಯಲ್ ಬೆಂಗಳೂರಿಗೆ ವಂದೇಭಾರತ್ ರೈಲನ್ನು ಪ್ರಾರಂಭಿಸುವ ಕನಸು ಬಿತ್ತಿದ್ದರು. ಆದರೆ ಆಗಿನ್ನೂ ಸಕಲೇಶಪುರ-ಸುಬ್ರಮಣ್ಯ ಘಾಟ್ ವಿದ್ಯುದ್ದೀಕರಣ ಕಾಮಗಾರಿ ಪೂರ್ಣ ಗೊಳ್ಳದ ಕಾರಣ ಇದು ನನಸಾಗಿರಲಿಲ್ಲ. ಮುಂದೆ ಭಾರತೀಯ ರೈಲ್ವೆಯ ಸಂಪೂರ್ಣ ವಿದ್ಯುದೀಕರಣ ಯೋಜನೆಯಂತೆ ಕಾರವಾರ - ಮಂಗಳೂರು - ಬೆಂಗಳೂರು ಮಾರ್ಗ ವಿದ್ಯುದ್ದೀಕರಣ ಪೂರ್ಣಗೊಂಡು ಮಾರ್ಗದಲ್ಲಿ ವಂದೇ ಭಾರತ್ ರೈಲು ಓಡುವ ಕನಸು ಮತ್ತೆ ಚಿಗುರಿತ್ತು.
ಕಳೆದ ವರ್ಷ ಬೆಂಗಳೂರಿಗೆ ಭೇಟಿ ನೀಡಿದ್ದ ವೇಳೆ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಬೆಂಗಳೂರು - ಮಂಗಳೂರು ಮಾರ್ಗವಾಗಿ ಮಡಗಾಂವ್ ತನಕ ವಂದೇ ಭಾರತ್ ರೈಲು ಓಡಿಸುವ ತೀರ್ಮಾನ ಪ್ರಕಟಿಸಿದ್ದರು. ಅದಾಗಲೇ ಮಂಗಳೂರು - ಮಡಗಾಂವ್ ನಡುವೆ ವಂದೇ ಭಾರತ್ ರೈಲು ಸೇವೆ ಇದ್ದ ಕಾರಣ, ಬೆಂಗಳೂರು ಮಂಗಳೂರು ನಡುವೆ ಹಲವು ಬಾರಿ ವಂದೇ ಭಾರತ್ ರೈಲಿನ ಪರೀಕ್ಷಾರ್ಥ ಓಡಾಟ ನಡೆಸಲಾಗಿತ್ತು. ಇದೀಗ ಬೆಂಗಳೂರಿನಿಂದ ಕರಾವಳಿಯ ಮೂಲಕ ಗೋವಾದವರೆಗೆ ವಂದೇಭಾರತ್ ರೈಲು ಓಡಾಟಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ ಯಲ್ಲಿ ತಿಳಿಸಿದ್ದಾರೆ.






