ನ.15-29: ತೀವ್ರತರ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ
ಉಡುಪಿ, ನ.10: ಜಿಲ್ಲೆಯಲ್ಲಿ ನವೆಂಬರ್ 15ರಿಂದ 29ರವರೆಗೆ ತೀವ್ರತರ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮ ಗಳನ್ನು ಹದಿನೈದು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಸನ್ನ ಹೆಚ್ ತಿಳಿಸಿದ್ದಾರೆ.
ಶುಕ್ರವಾರ ವರ್ಚುವಲ್ ಮೂಲಕ ನಡೆಸಿದ ತೀವ್ರತರ ಅತಿಸಾರ ಭೇದಿ ನಿಯಂತ್ರಣ ಕುರಿತ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
5 ವರ್ಷದೊಳಗಿನ ಮಕ್ಕಳಲ್ಲಿ ಅತಿಸಾರ ಭೇದಿಯಿಂದ ಸಂಭವಿಸುವ ಮರಣ ಸಂಖ್ಯೆಯನ್ನು ಶೂನ್ಯಕ್ಕಿಳಿಸುವ ಉದ್ದೇಶ ದಿಂದ ತೀವ್ರತರ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಹಾಗೂ ಓಆರ್‌ಎಸ್ ಪ್ಯಾಕ್‌ಗಳ ವಿತರಣಾ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ 5 ವರ್ಷದೊಳಗಿನ ಮಕ್ಕಳ ಸಂಖ್ಯೆ 60,999 ಗುರುತಿಸಿದ್ದು, ಇವರುಗಳ ಮನೆಗೆ ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಪ್ರಾಥಮಿಕ ಆರೋಗ್ಯ ಸಂರಕ್ಷಕರು ಭೇಟಿ ನೀಡಿ, ಅತಿಸಾರ ಭೇದಿ ಪ್ರಕರಣವಾದಾಗ ಓಆರ್‌ಎಸ್ ಚಿಕಿತ್ಸೆ ನೀಡುವ ಬಗ್ಗೆ ಮಾಹಿತಿ ಹಾಗೂ ಓ.ಆರ್.ಎಸ್ ಪ್ಯಾಕ್‌ಗಳ ವಿತರಣೆ ಮಾಡಲಿದ್ದಾರೆ ಎಂದರು.
ಅತಿಸಾರ ಭೇದಿಯಿಂದ ದೇಹವು ತೀವ್ರ ನಿರ್ಜಲೀಕರಣವಾಗುವ ಸಾಧ್ಯತೆ ಇರುತ್ತವೆ. ಇಂತಹ ಪ್ರಕರಣಗಳಾದ್ದಲ್ಲಿ ಅವರು ತಪ್ಪದೇ ಹತ್ತಿರದ ತಾಲೂಕು ಅಥವಾ ಜಿಲ್ಲಾ ಆಸ್ಪತೆಗಳಿಗೆ ಭೇಟಿ ನೀಡಿ, ಚಿಕಿತ್ಸೆ ಪಡೆಯಬೇಕು ಎಂದರು.
ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ, ಬಿಸಿಯೂಟ ತಯಾರಕರಿಗೆ, ಅಂಗನವಾಡಿ ಸಿಬ್ಬಂದಿಗಳಿಗೆ ಹಾಗೂ ಅಲ್ಲಿನ ಮಕ್ಕಳಿಗೆ ವೈಜ್ಞಾನಿಕವಾಗಿ ಕೈ ತೊಳೆಯುವ ವಿಧಾನ ಹಾಗೂ ಅವುಗಳಿಂದ ಆಗುವ ಪ್ರಯೋಜನಗಳ ಬಗ್ಗೆ ಶಿಕ್ಷಕರು ಹಾಗೂ ಆರೋಗ್ಯ ಸಿಬ್ಬಂದಿಗಳು ಮಾಹಿತಿ ನೀಡಲಿದ್ದಾರೆ ಎಂದರು.
ನವಜಾತ ಹಾಗೂ ಎಳೆಯ ಮಕ್ಕಳಿಗೆ 6 ತಿಂಗಳವರೆಗೆ ತಾಯ ಎದೆ ಹಾಲನ್ನು ಮಾತ್ರ ಶಿಶುವಿಗೆ ಕೊಡುವ ಬಗ್ಗೆ ಉತ್ತೇಜಿ ಸುವುದು ಹಾಗೂ ನಂತರದ ದಿನಗಳಲ್ಲಿ ತಾಯಿಯ ಎದೆ ಹಾಲಿನೊಂದಿಗೆ ಪೂರಕ ಆಹಾರ ನೀಡುವ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದರು.
ಈ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಸ್ಥಳೀಯ ಸಂಸ್ಥೆಗಳ ಸಮನ್ವಯ ಹಾಗೂ ಸಹಭಾಗಿತ್ವದೊಂದಿಗೆ ಕಾರ್ಯನಿರ್ವಸಿ, ಯಶಸ್ವಿಗೊಳಿಸಬೇಕೆಂದು ಸಿಇಓ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ನಾಗಭೂಷಣ ಉಡುಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಹಾಗೂ ವಿವಿಧ ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.







