ನ. 22: ಉಡುಪಿ ಧರ್ಮಪ್ರಾಂತ್ಯದ ಪರಮ ಪ್ರಸಾದ ಮೆರವಣಿಗೆ

ಉಡುಪಿ, ನ.17: ಉಡುಪಿ ಕಥೊಲಿಕ ಧರ್ಮಪ್ರಾಂತ್ಯದ ವಾರ್ಷಿಕ ಪರಮ ಪ್ರಸಾದದ ಮೆರವಣಿಗೆ ಹಾಗೂ ಕ್ರಿಸ್ತ ರಾಜರ ಮಹೋತ್ಸವದ ಆಚರಣೆ ನ.22ರಂದು ಮಧ್ಯಾಹ್ನ 3 ಗಂಟೆಗೆ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ನಲ್ಲಿ ನಡೆಯಲಿದೆ.
ಮಧ್ಯಾಹ್ನ 3 ಗಂಟೆಗೆ ವಂ.ಶೋನ್ ಸಾವಿಯೊ ಅಂದ್ರಾದೆ ನೇತೃತ್ವದಲ್ಲಿ ಜಪಸರ ಪ್ರಾರ್ಥನೆ ಆರಂಭವಾಗಲಿದ್ದು 3.30ಕ್ಕೆ ಧರ್ಮಾಧ್ಯಕ್ಷ ಅತಿ ವಂ.ಡಾ.ಲೆಸ್ಲಿ ಕ್ಲಿಫರ್ಡ್ ಡಿಸೋಜ ನೇತೃತ್ವದಲ್ಲಿ ಪವಿತ್ರ ಬಲಿಪೂಜೆ ಜರಗಲಿದ್ದು ಬಳಿಕ ಮಿಲಾಗ್ರಿಸ್ ಕ್ಯಾಥೆಡ್ರಲ್ನಿಂದ ಆರಂಭಗೊಂಡು ಸಂತೆಕಟ್ಟೆ ಮೌಂಟ್ ರೋಸರಿ ಚರ್ಚಿನ ತನಕ ತೆರೆದ ಅಲಂಕೃತ ವಾಹನದಲ್ಲಿ ಪರಮಪ್ರಸಾದವನ್ನು ಮೆರವಣಿಗೆಯಲ್ಲಿ ಕೊಂಡೊಯ್ದು ಸಾರ್ವಜನಿಕ ಗೌರವ ಸಲ್ಲಿಸಲಾಗುವುದು.
ಮೌಂಟ್ ರೋಸರಿ ಚರ್ಚ್ ವಠಾರದಲ್ಲಿ ಪಾಂಬೂರು ಚರ್ಚಿನ ಧರ್ಮಗುರು ವಂ|ಡಾ|ರೋಶನ್ ಡಿಸೋಜ ನೇತೃತ್ವ ದಲ್ಲಿ ಪ್ರವಚನ ನಡೆದು ಬಳಿಕ ಧರ್ಮಾಧ್ಯಕ್ಷರು ಪರಮ ಪ್ರಸಾದದ ಆಶೀರ್ವಚನ ನೀಡಲಿರುವರು. ಧರ್ಮಪ್ರಾಂತ್ಯದ 50ಕ್ಕೂ ಅಧಿಕ ಧರ್ಮಗುರುಗಳು, 300ಕ್ಕೂ ಅಧಿಕ ಧರ್ಮಭಗಿನಿಯರು ಮತ್ತು 3000ಕ್ಕೂ ಅಧಿಕ ಕ್ರೈಸ್ತ ಬಾಂಧವರು ಪವಿತ್ರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ.ಡೆನಿಸ್ ಡೆಸಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




