ನ. 27-29: ಬ್ರಹ್ಮಾವರದಲ್ಲಿ ಉಡುಪಿ ಆಹಾರ ಮತ್ತು ಉದ್ಯಮ ಮೇಳ; ಆಹಾರೋದ್ಯಮ ರತ್ನ, ಉದ್ಯಮ ರತ್ನ ಪ್ರಶಸ್ತಿ ಪ್ರದಾನ

ಉಡುಪಿ, ನ.25: ಬ್ರಹ್ಮಾವರದ ಉಡುಪಿ ಜಿಲ್ಲಾ ಬೇಕರಿ ಮತ್ತು ಖಾದ್ಯ ತಿನಿಸುಗಳ ತಯಾರಕರ ಹಾಗೂ ಮಾರಾಟಗಾರರ ಸಂಘ ತನ್ನ ದಶಮಾನೋತ್ಸವದ ಅಂಗವಾಗಿ ಮೂರು ದಿನಗಳ ‘ಉಡುಪಿ ಆಹಾರ ಮತ್ತು ಉದ್ಯಮ ಮೇಳ-2026’ವನ್ನು ಇದೇ ನ.27ರಿಂದ 29ರವರೆಗೆ ಬ್ರಹ್ಮಾವರದ ಗಾಂಧಿ ಮೈದಾನದಲ್ಲಿ ಆಯೋಜಿಸಿದೆ ಎಂದು ಸಂಘದ ಅಧ್ಯಕ್ಷ ವಿಶ್ವನಾಥ ಕುಲಾಲ್ ಹಾಗೂ ಕಾರ್ಯಕ್ರಮದ ಸಂಚಾಲಕ ಶ್ರೀಧರ ಪಿ.ಎಸ್. ತಿಳಿಸಿದ್ದಾರೆ.
ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಮೇಳದಲ್ಲಿ ಆಹಾರೋದ್ಯ ಮಕ್ಕೆ ಸಂಬಂಧಿಸಿದ ಯಂತ್ರೋಪಕರಣಗಳ ಪ್ರದರ್ಶನ, ಪ್ರಾತ್ಯಕ್ಷಿಕೆ ಹಾಗೂ ಮಾರಾಟ ಮಳಿಗೆಗಳು, ಕರ್ನಾಟಕ ಕರಾವಳಿಯ ಸಾಂಪ್ರದಾಯಿಕ ಖಾದ್ಯ-ವೈವಿಧ್ಯತೆ ಆಹಾರ ಮಳಿಗೆಗಳು, ಗೃಹೋಪಯೋಗಿ ಮಳಿಗೆಗಳು ಇರಲಿವೆ ಎಂದರು.
ಆಹಾರೋದ್ಯಮ ಸೇರಿದಂತೆ ಹೊಸ ಉದ್ಯಮಕ್ಕೆ ಉತ್ತೇಜನ, ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ, ಗ್ರಾಮೀಣ ಭಾಗದ ವಿದ್ಯಾವಂತ ಯುವಜನತೆೆಗೆ ಸ್ವಯಂ ಉದ್ಯೋಗದ ಅವಕಾಶ ಒದಗಿಸುವುದು ಹಾಗೂ ಕರಾವಳಿಯ ಸಾಂಪ್ರದಾಯಿಕ ಆಹಾರ ವೈವಿಧ್ಯವನ್ನು ಪರಿಚಯಿಸುವ ಉದ್ದೇಶವನ್ನು ಈ ಮೇಳ ಹೊಂದಿದೆ ಎಂದು ಶ್ರೀಧರ ಪಿ.ಎಸ್. ತಿಳಿಸಿದರು.
ನ.27ರಿಂದ 29ರವರೆಗೆ ಪ್ರತಿದಿನ ಬೆಳಿಗ್ಗೆ 10:00ರಿಂದ ರಾತ್ರಿ 10:00 ರವರೆಗೆ ಮೇಳ ನಡೆಯಲಿದೆ. ಜಿಲ್ಲೆಯ ಗ್ರಾಮೀಣ ಭಾಗದ ವಿದ್ಯಾವಂತ ನಿರುದ್ಯೋಗಿ ಯುವಕ-ಯುವತಿಯರಿಗೆ ಆಹಾರೋದ್ಯಮದಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳಲು ಪ್ರೋತ್ಸಾಹ ನೀಡಲು ಆದ್ಯತೆ ನೀಡಲಾಗುತ್ತದೆ. ಅಲ್ಲದೇ ಆಹಾರೋದ್ಯಮ ಕ್ಷೇತ್ರದಲ್ಲಿ ಸಾಧನೆಗೈದ ವರಿಗೆ ‘ಆಹಾರೋದ್ಯಮ ರತ್ನ’ ಹಾಗೂ ಉದ್ಯಮ ಕ್ಷೇತ್ರದ ಸಾಧಕರಿಗೆ ‘ಉದ್ಯಮ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಸಂಘದ ಅಧ್ಯಕ್ಷ ವಿಶ್ವನಾಥ ಕುಲಾಲ್ ತಿಳಿಸಿದರು.
ಇದರೊಂದಿಗೆ ಪ್ರತಿದಿನ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಮನರಂಜನಾ ಆಟಗಳನ್ನೂ ಆಯೋಜಿಸಲಾಗಿದೆ. ನ.27ರಂದು ಸಂಜೆ 4:30ಕ್ಕೆ ಕುಂಜಾಲು ಸರ್ಕಲ್‌ನಿಂದ ಗಾಂಧಿ ಮೈದಾನದವರೆಗೆ ವೈಭವದ ವಾಹನ ಜಾಥಾ ನಡೆದು 6:30ಕ್ಕೆ ಮೇಳ ಉದ್ಘಾಟನೆಗೊಳ್ಳಲಿದೆ. ಇದಕ್ಕೆ ಮುನ್ನ 6ರಿಂದ ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ಕಲಾವಿದರಿಂದ ನೃತ್ಯೋಪಾಸನೆ ಕಾರ್ಯಕ್ರಮ ನಡೆಯಲಿದೆ.
ಮೇಳವನ್ನು ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ ಉದ್ಘಾಟಿಸಲಿದ್ದಾರೆ. ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಆಹಾರೋದ್ಯಮ ಯಂತ್ರೋಪಕರಣಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳನ್ನು ಉದ್ಘಾಟಿಸಿದರೆ, ಉಡುಪಿ ಶಾಸಕ ಯಶಪಾಲ್ ಸುವರ್ಣ ಗೃಹೋಪಯೋಗಿ ವಸ್ತುಗಳ ಮಳಿಗೆಗಳನ್ನು ಉದ್ಘಾಟಿಸಲಿದ್ದಾರೆ. ಉದ್ಯಮಿ ಮನೋಹರ ಶೆಟ್ಟಿ ಆಹಾರ ಮೇಳಕ್ಕೆ ಚಾಲನೆ ನೀಡಲಿದ್ದಾರೆ.
ಅಂದು ರಾತ್ರಿ 7:00 ಗಂಟೆಗೆ ಸಂಘದ ದಶಮಾನೋತ್ಸವ ಸಂಭ್ರಮದ ಅಂಗವಾಗಿ ‘ದಶರುಚಿ-2026’ ಸಭಾ ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಉದ್ಘಾಟಿಸಲಿದ್ದು, ದಶಮಾನೋತ್ಸವ ಸಮಿತಿ ಅಧ್ಯಕ್ಷ ಹೆರಾಲ್ಡ್ ಡಿ’ಸೋಜ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಸಂದರ್ಭ ದಲ್ಲಿ ಆಹಾರೋದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕೃಷ್ಣ ಪ್ರಸಾದ್ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಸಂಪತ್ ಕುಮಾರ್ ಶೆಟ್ಟಿ ಹಾಗೂ ಉಡುಪಿಯ ಆಲ್ವಿನ್ ಬೇಕರಿ ವಾಲ್ಟರ್ ಜೋಸೆಫ್ ಸಲ್ಡಾನ್ಹಾರಿಗೆ ಆಹಾರೋದ್ಯಮ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.
ನ.28ರಂದು ರಾತ್ರಿ 8:00ಗಂಟೆಗೆ ‘ದಶರುಚಿ’ ಸಿಂಹಾವಲೋಕನ ಸಭೆ ನಡೆಯಲಿದೆ. ಸಂಘದ ಉಪಾಧ್ಯಕ್ಷ ಸುದೇವ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು, ಸಂಸದ ಕೋಟ ಶ್ರೀನಿವಾಸ ಪೂಜಾರಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭಾಗವಹಿಸಲಿದ್ದಾರೆ. ಉದ್ಯಮಿ ಶ್ರೀನಿವಾಸ ರಾವ್ ಗೋಪಾಡಿ ಹಾಗೂ ಆಲ್ಬರ್ಟ್ ವಿಲ್‌ಫ್ರೆಡ್ ಡಿಸೋಜಾ ಅವರಿಗೆ ಆಹಾರೋದ್ಯಮರತ್ನ ಪ್ರಶಸ್ತಿ ಹಾಗೂ ಮಂಗಳೂರು ರೋಹನ್ ಕಾರ್ಪೋರೇಷನ್‌ನ ರೋಹನ್ ಮೊಂತೆರೊ ಅವರಿಗೆ ಉದ್ಯಮ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ನ.29ರ ರವಿವಾರ ಸಂಜೆ 7:00ಗಂಟೆಗೆ ಸಮಾರೋಪ ಸಮಾರಂಭ ಜಿಲ್ಲಾ ಉಸ್ತುವಾರಿ ಸಚಿವ ರಿಝ್ವಾನ್ ಅರ್ಷದ್ ಉಪಸ್ಥಿತಿಯಲ್ಲಿ ನಡೆಯಲಿದ್ದು, ಕಾರ್ಕಳ ಶಾಸಕ ಸುನೀಲ್ ಕುಮಾರ್ ಸಮಾರೋಪ ಭಾಷಣ ಮಾಡಲಿದ್ದಾರೆ. ಕುಂದಾಪುರ ಶಾಸಕ ಕಿರಣ್‌ಕುಮಾರ್ ಕೊಡ್ಗಿ ಆಶಯ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಈ ದಿನ ಉದ್ಯಮಿ ಆನಂದ ಸಿ.ಕುಂದರ್‌ಗೆ ಉದ್ಯಮ ರತ್ನ ಪ್ರಶಸ್ತಿ ಹಾಗೂ ರಾಘವೇಂದ್ರ ರಾವ್ ನೇರಂಬಳ್ಳಿ ಮತ್ತು ಪ್ರಭಾಕರ ಪೂಜಾರಿ ಇವರಿಗೆ ಆಹಾರೋದ್ಯಮ ರತ್ನ ಪ್ರಶಸ್ತಿ ನೀಡಲಾಗುವುದು.
ಅಂದು ರಾತ್ರಿ ‘ಉಡುಪಿ ಸರಿಗಮಪ’ದ ಪೈನಲ್ ನಡೆಯಲಿದ್ದು, ವಿಜೇತರಿಗೆ ಪ್ರಶಸ್ತಿ ಹಾಗೂ ನಗದು ಬಹುಮಾನ ಪ್ರದಾನ ಮಾಡಲಾಗುವುದು ಎಂದು ಶ್ರೀಧರ ಪಿ.ಎಸ್. ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ದಶಮಾನೋತ್ಸವ ಸಮಿತಿ ಅಧ್ಯಕ್ಷ ಹೆರಾಲ್ಡ್ ಡಿಸೋಜಾ, ಕೋಶಾಧಿಕಾರಿ ಶಶಿಕಾಂತ್ ಜಿ. ನಾಯಕ್, ಸಂಘಟನಾ ಕಾರ್ಯದರ್ಶಿ ದಿವಾಕರ ಸನಿಲ್, ಪ್ರಧಾನ ಕಾರ್ಯದರ್ಶಿ ಸತ್ಯಪ್ರಕಾಶ್ ಶೆಣೈ ಉಪಸ್ಥಿತರಿದ್ದರು.






