ನ.28: ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿ ಪ್ರದಾನ

ಉಡುಪಿ, ನ.17: ಮಣಿಪಾಲ ಗ್ಲೋಬಲ್ನ ಮುಖ್ಯಸ್ಥರಾದ ಟಿ.ವಿ. ಮೋಹನದಾಸ ಪೈ ಅವರು ತಮ್ಮ ತಾಯಿ ಟಿ.ವಿಮಲಾ ವಿ.ಪೈ ಹೆಸರಿನಲ್ಲಿ ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಹಾಗೂ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ಗಳ ಸಹಭಾಗಿತ್ವದಲ್ಲಿ ನೀಡುವ ಒಂದು ಲಕ್ಷ ರೂ.ಬಹುಮಾನ ನಿಧಿಯನ್ನು ಹೊಂದಿರುವ ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿ ಪ್ರದಾನ ಸಮಾರಂಭ ಇದೇ ನ.28ರಂದು ಎಂಜಿಎಂ ಕಾಲೇಜು ಆವರಣದಲ್ಲಿರುವ ನೂತನ ರವೀಂದ್ರ ಮಂಟಪದಲ್ಲಿ ಬೆಳಗ್ಗೆ 10:30ಕ್ಕೆ ನಡೆಯಲಿದೆ.
2025ನೇ ಸಾಲಿನ ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿಯನ್ನು ಮೈಸೂರಿನ ಹಿರಿಯ ಪುರಾತತ್ವಜ್ಞ ಹಾಗೂ ಶಾಸನ ತಜ್ಞರಾಗಿರುವ 81 ವರ್ಷ ಪ್ರಾಯದ ಡಾ.ಎಂ.ಎಸ್. ಕೃಷ್ಣಮೂರ್ತಿ ಅವರಿಗೆ ಪ್ರದಾನ ಮಾಡಲಾಗುವುದು. ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜ್ಯುಕೇಷನ್ನ ಕಾರ್ಯದರ್ಶಿ ಡಾ.ನಾರಾಯಣ ಸಭಾಹಿತ್ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಖ್ಯಾತ ಇತಿಹಾಸಜ್ಞ ಹಾಗೂ ಹಿರಿಯ ಸಂಶೋಧಕ ಡಾ.ಪುಂಡಿಕಾಯ್ ಗಣಪಯ್ಯ ಭಟ್ ಅಭಿನಂದನಾ ಭಾಷಣ ಮಾಡಲಿದ್ದಾರೆ.
ಮಂಗಳೂರು ಸಂತ ಅಲೋಸಿಯಸ್ ಡೀಮ್ಡ್ ವಿವಿಯ ರಿಸರ್ಚ್ ಪ್ರೊಪೆಸರ್ ಡಾ.ಡೆನಿಸ್ ಫೆರ್ನಾಂಡೀಸ್ ಅವರು ‘ಎಂ.ಗೋವಿಂದ ಪೈ ಅವರ ಐತಿಹಾಸಿಕ ಬರಗಳಲ್ಲಿ ಪ್ರಾದೇಶಿಕ ಹಿರಿಮೆ ಹಾಗೂ ರಾಷ್ಟ್ರೀಯವಾದಿ ಚಿಂತನೆ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದು ಸಂಘಟಕರ ಪ್ರಕಟಣೆ ತಿಳಿಸಿದೆ.




