ಉಡುಪಿ: ಸೆ. 8ರಿಂದ ನರ್ಸರಿ ಸಸ್ಯೋತ್ಸವ-2023

ಉಡುಪಿ, ಸೆ.5: ಉಡುಪಿ ಜಿಲ್ಲಾ ನರ್ಸರಿಮೆನ್ ಅಸೋಸಿಯೇಷನ್, ಉಡುಪಿ ಜಿಲ್ಲಾಡಳಿತ, ಜಿಲ್ಲಾ ತೋಟಗಾರಿಕಾ ಇಲಾಖೆ ಗಳ ಸಹಭಾಗಿತ್ವದಲ್ಲಿ ಲಯನ್ಸ್ ಇಂಟರನೇಷನಲ್ ಲಯನ್ಸ್ ಜಿಲ್ಲೆ 317ಸಿ ಸಹಕಾರದೊಂದಿಗೆ ಸೆ.8ರಿಂದ 10ರವರೆಗೆ ದೊಡ್ಡಣಗುಡ್ಡೆಯ ತೋಟಗಾರಿಕಾ ಪ್ರಾಂಗಣದ ಪುಷ್ಪ ಹರಾಜು ಕೇಂದ್ರದಲ್ಲಿ ನರ್ಸರಿ ಸಸ್ಯೋತ್ಸವ-2023 ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಸುರೇಶ್ ಸುವರ್ಣ ಕುರ್ಕಾಲು ತಿಳಿಸಿದ್ದಾರೆ.
ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.8ರ ಬೆಳಗ್ಗೆ 10:00ಗಂಟೆಗೆ ಸಸ್ಯೋತ್ಸವವನ್ನು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಉದ್ಘಾಟಿಸುವರು ಎಂದರು. ಶಾಸಕ ಯಶಪಾಲ್ ಸುವರ್ಣ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ಸಮಾರಂಭದಲ್ಲಿ ಸೀತಾನದಿಯ ಹಿರಿಯ ನರ್ಸರಿ ಮಾಲಕರಾದ ಕುಂದಾಪುರದ ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಇವರನ್ನು ವಿಶೇಷ ವಾಗಿ ಸನ್ಮಾನಿಸಲಾಗುವುದು ಎಂದರು.
ಒಟ್ಟು ಮೂರು ದಿನಗಳ ಕಾಲ ಸಸ್ಯೋತ್ಸವ ನಡೆಯಲಿದೆ. ಈ ಮೇಳದಲ್ಲಿ ನರ್ಸರಿ ಮಳಿಗೆಗಳು, ಅಹಾರ ಮಳಿಗೆಗಳು, ಕೃಷಿ ಉತ್ಪನ್ನ, ಸಾವಯವ ಗೊಬ್ಬರ, ಕೃಷಿ ಯಂತ್ರೋಪಕರಣಗಳ ಮಳಿಗೆಗಳು ಇರಲಿವೆ.
ಸುದ್ದಿಗೋಷ್ಠಿಯಲ್ಲಿ ನರ್ಸರಿಮೆನ್ ಅಸೋಸಿಯೇಷನ್‌ನ ಕಾರ್ಯದರ್ಶಿ ವಾಸುದೇವ್ ಗಡಿಯಾರ್, ಖಜಾಂಚಿ ಸುರೇಶ್ ಶೆಟ್ಟಿ, ಲಯನ್ಸ್ ಕ್ಲಬ್‌ನ ರವಿರಾಜ್ ನಾಯಕ್ ಉಪಸ್ಥಿತರಿದ್ದರು.







