ಸೆ.2ರಂದು ‘ಅವರ್ ಸ್ಟೇಟ್ ಅವರ್ ಟೇಸ್ಟ್’ ಕುಕ್ಕಿಂಗ್ ಸ್ಪರ್ಧೆ

ಉಡುಪಿ, ಆ.28: ಆಂಗ್ಲ ದೈನಿಕ ‘ದಿ ಹಿಂದು’ ಪತ್ರಿಕೆಯ ಆಶ್ರಯದಲ್ಲಿ ಕರ್ನಾಟಕದ ಅತ್ಯಂತ ರುಚಿಕರ ಕುಕ್ಕಿಂಗ್ ಸ್ಪರ್ಧೆ ಸೆ.2ರಂದು ಉಡುಪಿಯ ಹೊಟೇಲ್ ಮಣಿಪಾಲ ಇನ್‌ನಲ್ಲಿ ನಡೆಯಲಿದೆ ಎಂದು ಕಾರ್ಯಕ್ರಮದ ವ್ಯವಸ್ಥಾಪಕಿ ಶುಭಾ ರಾಜಶೇಖರ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ಹಂತದಲ್ಲಿ ಪ್ರತಿ ಜಿಲ್ಲಾ ಮಟ್ಟದಲ್ಲಿ ಅಡುಗೆ ಸ್ಪರ್ಧೆಯನ್ನು ನಡೆಸಿ ಅದರಲ್ಲಿ ವಿಜೇತರಾದ ಮೂವರನ್ನು ಬೆಂಗಳೂರಿನಲ್ಲಿ ಸೆ.ತಿಂಗಳು ನಡೆಯುವ ಮೆಗಾ ಪೈನಲ್ಸ್‌ಗೆ ಆಯ್ಕೆ ಮಾಡಲಾಗುವುದು ಎಂದರು.
ಅಡುಗೆಗೆ ವಿಶ್ವಪ್ರಸಿದ್ಧವಾದ ಉಡುಪಿಯಲ್ಲಿ ಅತ್ಯಂತ ವೈವಿಧ್ಯಮಯ ಹಾಗೂ ಅತಿ ಹೆಚ್ಚಿನ ಸಾಂಪ್ರದಾಯಿಕ ಸಸ್ಯಾಹಾರಿ ಹಾಗೂ ಮಾಂಸಾಹಾರಿ ಆಹಾರ, ತಿನಿಸುಗಳನ್ನು ನಿರೀಕ್ಷಿಸುತಿದ್ದೇವೆ ಎಂದ ಶುಭಾ ರಾಜಶೇಖರ್, ಮೊದಲ ಸುತ್ತಿನ ಸ್ಪರ್ಧೆ ಉಡುಪಿ ಕರಾವಳಿ ಬೈಪಾಸ್‌ನ ಮಣಿಪಾಲ ಇನ್‌ನಲ್ಲಿ ಸೆ.2ರಂದು ಬೆಳಗ್ಗೆ 10:30ರಿಂದ ನಡೆಯಲಿದೆ ಎಂದರು.
ಆಸಕ್ತರು ಎಷ್ಟೇ ಬಗೆಯ ವೆಜ್ ಹಾಗೂ ನಾನ್‌ವೆಜ್ ಆಹಾರವನ್ನು ಮನೆಯಲ್ಲೇ ತಯಾರಿಸಿ ತರಬಹುದಾಗಿದೆ. ಇವುಗಳನ್ನು ಒಗ್ಗರಣೆ ಡಬ್ಬಿ ಖ್ಯಾತಿಯ ಚೆಫ್ ಮುರಳಿ ಹಾಗೂ ಸುಚಿತ್ರಾ ಮುರಳೀಧರ್ ಅವರು ಸ್ಪರ್ಧೆಗೆ ಬಂದ ಎಲ್ಲಾ ಆಹಾರ, ತಿನಿಸು ಗಳ ರುಚಿ ನೋಡಿ ತೀರ್ಪು ಪ್ರಕಟಿಸಲಿದ್ದಾರೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಯಾರು ಕೂಡ ಆಹಾರವನ್ನು ತಯಾರಿಸಿ ತರಬಹುದು. ಆಹಾರದ ಬಗ್ಗೆ ತೀರ್ಪುಗಾರರು ಕೇಳುವ ಪ್ರಶ್ನೆಗಳಿಗೆ ಅವರು ಉತ್ತರಿಸಬೇಕಾಗುತ್ತದೆ ಎಂದರು.
ಪ್ರತಿ ಜಿಲ್ಲೆಯಲ್ಲಿ ಮೊದಲ ಮೂರು ಸ್ಥಾನ ಪಡೆದವರು ಬೆಂಗಳೂರಿನ ಫೈನಲ್ಸ್‌ನಲ್ಲಿ ಅವರು ಸ್ವತಹ ಆಹಾರ ತಯಾರಿಸ ಬೇಕಾಗುತ್ತದೆ. ಇದರಲ್ಲಿ ಗೆದ್ದವರಿಗೆ ಮೊದಲ ಮೂರು ಬಹುಮಾನವಾಗಿ 1ಲಕ್ಷ ರೂ., 60ಸಾವಿರ ಹಾಗೂ 40ಸಾವಿರ ರೂ. ನಗದು ಹಣದೊಂದಿಗೆ ಇತರ ಆಕರ್ಷಕ ಬಹುಮಾನವಿರುತ್ತದೆ. ಜಿಲ್ಲಾಮಟ್ಟದಲ್ಲಿ ಮೊದಲ ಮೂರು ಸ್ಥಾನಿಗಳಿಗೆ ಸರ್ಟಿಫಿಕೇಟ್‌ನೊಂದಿಗೆ 5000ರೂ.ವೋಚರ್, ಗ್ಯಾಸ್‌ಸ್ಟೌವ್, 2,500 ವೋಚರ್ ಮತ್ತು ಕುಕ್ಕರ್ ಹಾಗೂ ಒಂದು ಸಾವಿರ ರೂ.ವೋಚರ್ ಮತ್ತು ಫ್ರೈಯಿಂಗ್ ಫಾನ್ ನೀಡಲಾಗುತ್ತದೆ ಎಂದು ಶುಭಾ ರಾಜಶೇಖರ್ ತಿಳಿಸಿದರು.
ಈ ಸ್ಪರ್ಧೆಯಲ್ಲಿ ಯಾವುದೋ ವಯೋಮಿತಿ ಇಲ್ಲದೆ ಎಲ್ಲರೂ ಭಾಗವಹಿ ಸಬಹುದು. ನಾಡಿನ ಆಹಾರವೈವಿಧ್ಯತೆಯನ್ನು ಪರಿಚಯಿಸುವುದು ಸ್ಪರ್ಧೆಯ ಉದ್ದೇಶವಾಗಿದೆ. ಸ್ಥಳದಲ್ಲೇ ಹೆಸರು ನೊಂದಾಯಿಸಿಕೊಳ್ಳಲು ಅವಕಾಶವಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 9606734980ನ್ನು ಸಂಪರ್ಕಿಸು ವಂತೆ ಶುಭಾ ರಾಜಶೇಖರ್ ತಿಳಿಸಿದರು.
ಸೆ.3ರಂದು ಮಂಗಳೂರಿನಲ್ಲೂ ಇದೇ ಸ್ಪರ್ಧೆ ನಡೆಯಲಿದ್ದು, ಅಲ್ಲೂ ಇಲ್ಲಿನ ಆಸಕ್ತರು ಬಂದು ಭಾಗವಹಿಸಬಹುದು ಎಂದರು. ಸುದ್ದಿಗೋಷ್ಠಿಯಲ್ಲಿ ರಾಜಶೇಖರ್, ಮೊಹಮ್ಮದ್ ಖಲೀಲ್, ಅನ್ಸಾರ್ ಅಹ್ಮದ್, ರಂಜೀತಾ ಶೇಟ್, ಲಕ್ಷ್ಮೀ ಅಂಕಿತ್ ಆಚಾರ್ಯ ಉಪಸ್ಥಿತರಿದ್ದರು.







