ಜಾತಿ ವ್ಯವಸ್ಥೆ ವಿರುದ್ಧದ ದಿಟ್ಟಧ್ವನಿ ಪಿ.ಲಂಕೇಶ್: ಡಾ.ವಿಷ್ಣುಮೂರ್ತಿ ಪ್ರಭು

ಉಡುಪಿ, ಜು.23: ಲಂಕೇಶರ ಕಥೆಗಳು ಮಾನವ ಸಮಾಜದ ಏಳಿಗೆಗೆ ತೊಡಕಾದ ಜಾತಿವ್ಯವಸ್ಥೆ, ಅಸಮಾನತೆಯ ವಿರುದ್ಧ ಧ್ವನಿ ಎತ್ತುತ್ತವೆ. ಅನುಭವದ ಪ್ರಮಾಣಿಕತೆಯ ಶೋಧನೆಯ ಕುರಿತ ದೃಷ್ಟಿಕೋನವು ಲಂಕೇಶರ ಕಥೆಗಳಲ್ಲಿದೆ ಎಂದು ಉಡುಪಿ ತೆಂಕನಿಡಿಯೂರು ಸರಕಾರಿ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ವಿಷ್ಣುಮೂರ್ತಿ ಪ್ರಭು ಹೇಳಿದ್ದಾರೆ.
ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು, ಉಡುಪಿ ಚಕೋರ ಸಾಹಿತ್ಯ ವಿಚಾರ ವೇದಿಕೆ, ಕುಂದಾಪುರ ಕೋಟೇಶ್ವರ ಸರಕಾರಿ ಪದವಿ ಪೂರ್ವ ಕಾಲೇಜುಗಳ ಸಹಯೋಗದೊಂದಿಗೆ ಕಾಲೇಜಿನ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾದ ಕಾರ್ಯಕ್ರಮದಲ್ಲಿ ‘ಮುಟ್ಟಿಸಿಕೊಂಡವನು’ ಪಿ.ಲಂಕೇಶರ ಕಥೆಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯಹಾಗೂ ಹಿರಿಯಡಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಜಯಪ್ರಕಾಶ ಶೆಟ್ಟಿ ಮಾತನಾಡಿ, ಜಾತಿ, ಧರ್ಮ, ಲಿಂಗ ತಾರತಮ್ಯ ಇಂತಹ ಗುಣಗಳನ್ನು ತಲೆಯಿಂದ ತೊರೆದಾಗ, ಸಂವಿಧಾನಿಕ ಮೌಲ್ಯಗಳಾದ ಸ್ವಾಂತ್ರತ್ಯ, ಸಮಾನತೆ, ಭ್ರಾತೃತ್ವ ಇವುಗಳನ್ನು ಪಡೆಯಲು ಸಾಧ್ಯ ಎಂದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರಕಾಶ ಶೆಟ್ಟಿ ವಹಿಸಿದ್ದರು. ಇದೇ ಸಂದರ್ಭದಲ್ಲಿ ಕಾಲೇಜಿನ ಸಾಹಿತ್ಯ, ಸಾಂಸ್ಕೃತಿಕ, ಕ್ರೀಡಾ ಸಂಘಗಳನ್ನು ಉದ್ಘಾಟಿಸಲಾಯಿತು. ಚಕೋರ ವೇದಿಕೆಯ ಜಿಲ್ಲಾ ಸಂಚಾಲಕ ರಾಮಾಂಜಿ ನಮ್ಮಭೂಮಿ, ಕನ್ನಡ ಉಪನ್ಯಾಸಕ ಸುಧಾಕರ ದೇವಾಡಿಗ ಬಿ. ಸ್ವಾಗತಿಸಿದರು. ರಾಜ್ಯಶಾಸ್ತ್ರ ಉಪನ್ಯಾಸಕ ಹರೀಶ್ ನಾಯಕ್ ವಂದಿಸಿದರು. ಚಕೋರ ವೇದಿಕೆಯ ಸಂಚಾಲಕಿ ಶಾಲಿನಿ ಯು.ಬಿ. ಕಾರ್ಯಕ್ರಮ ನಿರೂಪಿಸಿದರು.







