Padubidri | ಗುತ್ತಿಗೆದಾರ ಡೇವಿಡ್ ಡಿಸೋಜ ಶೂಟೌಟ್ ಪ್ರಕರಣ: ಹಣಕಾಸಿನ ವಿಚಾರದಲ್ಲಿ ವೈಮನಸ್ಸೇ ಹತ್ಯೆಗೆ ಕಾರಣ; ತನಿಖೆಯಿಂದ ಬಯಲು

ಉಡುಪಿ: ಮುದರಂಗಡಿ ಗ್ರಾ.ಪಂ ಮಾಜಿ ಅಧ್ಯಕ್ಷ ಹಾಗೂ ಗುತ್ತಿಗೆದಾರ ಡೇವಿಡ್ ಡಿಸೋಜ ಅವರನ್ನು ಗುಂಡಿಕ್ಕಿ ಹತ್ಯೆಗೈಯ್ಯಲು ಹಣಕಾಸು ವಿಚಾರದಲ್ಲಿನ ವೈಮನಸ್ಸೇ ಕಾರಣ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಇದೇ ಕಾರಣಕ್ಕೆ ಸುಪಾರಿ ನೀಡಿ ಹತ್ಯೆಗೈಯ್ಯಲಾಗಿದ್ದು, ಈ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಉತ್ತರ ಪ್ರದೇಶದ ಥಾಣಾ ಪಿಲ್ವದ ರಾಜು(42), ಉತ್ತರಖಾಂಡದ ಅಜಯ್ ರಸ್ತೋಗಿ ಯಾನೆ ಅನ್ಮೋಲ್(23) ಮತ್ತು ಬಿಹಾರ ರಾಜ್ಯದ ಜಿಯಾಹುಲ್ ವಜೂಲ್ ಶೇಖ್ ಯಾನೆ ದೀಪಕ್(38) ಬಂಧಿತ ಆರೋಪಿಗಳು.
ಆರೋಪಿ ರಾಜುವಿನಿಂದ ಕೃತ್ಯಕ್ಕೆ ಬಳಸಿದ ಪಿಸ್ತೂಲ್ ಹಾಗೂ ಆರೋಪಿಗಳು ಕೃತ್ಯ ನಡೆಸಲು ಉಪಯೋಗಿಸಿ, ಪಡುಬಿದ್ರೆ ಸಮೀಪದ ಎರ್ಮಾಳಿನಲ್ಲಿ ಬಿಟ್ಟು ಹೋಗಿದ್ದ ಬೈಕ್‌ನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಡೇವಿಡ್ ಹತ್ಯೆಗೆ ಸುಪಾರಿ:
ಗುತ್ತಿಗೆದಾರರಾಗಿದ್ದ ಡೇವಿಡ್ ಡಿಸೋಜ ಅವರನ್ನು ಹತ್ಯೆಗೈಯ್ಯಲು ಸುಫಾರಿ ನೀಡಿರುವುದು ಪೊಲೀಸ್ ತನಿಖೆ ಯಿಂದ ಬೆಳಕಿಗೆ ಬಂದಿದೆ.
ಡೇವಿಡ್ ಡಿಸೋಜ ನಡೆಸುತ್ತಿದ್ದ ಕಾಮಗಾರಿಗೆ ಸಂಬಂಧಿಸಿದಂತೆ ಅನ್ಯ ರಾಜ್ಯದ ಕಂಪೆನಿಯೊಂದಿಗೆ ಹಣಕಾಸಿನ ವಿಚಾರದಲ್ಲಿ ವೈಮನಸ್ಸು ಉಂಟಾಗಿತ್ತು. ಇದೇ ಕಾರಣದಿಂದ ಡೇವಿಡ್ ಅವರನ್ನು ಕೊಲೆ ಮಾಡಲು ಸುಪಾರಿ ನೀಡಲಾಗಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ.
‘ಈ ಕೃತ್ಯಕ್ಕೆ ಸಹಕರಿಸಿದ, ಹಣಕಾಸಿನ ನೆರವನ್ನು ನೀಡಿದ ಮತ್ತು ಆರೋಪಿತರಿಗೆ ಆಶ್ರಯ ನೀಡಿದವರನ್ನು ಪತ್ತೆ ಹಚ್ಚಲು ತನಿಖೆ ಮುಂದುವರೆಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ತಿಳಿಸಿದ್ದಾರೆ.
ಬಸ್ಸಿನಲ್ಲಿ ಪರಾರಿಗೆ ಯತ್ನ:
ಕೃತ್ಯದಲ್ಲಿ ನೇರವಾಗಿ ಪಾಲ್ಗೊಂಡ ಮೂವರು ಆರೋಪಿಗಳು ಬಸ್ಸಿನಲ್ಲಿ ಭಟ್ಕಳ ಕಡೆಗೆ ಹೊರಟಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಆರೋಪಿಗಳು ಹೋಗುತ್ತಿದ್ದ ಬಸ್ಸನ್ನು ಬೈಂದೂರಿನ ಒತ್ತಿನಾಣೆ ಎಂಬಲ್ಲಿ ತಡೆದು ನಿಲ್ಲಿಸಿದರು.
ಈ ವೇಳೆ ಪೊಲೀಸ್ ತಂಡವು ತಪಾಸಣೆ ನಡೆಸುವಾಗ ಬಸ್ಸಿನಲಿದ್ದ ಮೂವರು ಆರೋಪಿಗಳು ಬಸ್ಸಿನಿಂದ ಇಳಿದು ಓಡಿ ಹೋದರು. ಅವರನ್ನು ಬೆನ್ನಟ್ಟಿ ಹಿಡಿಯುವ ವೇಳೆ ಪ್ರಮುಖ ಆರೋಪಿ ರಾಜು, ಕಾಪು ಪೊಲೀಸ್ ಠಾಣಾ ಎಸ್ಸೈ ತೇಜಸ್ವಿ ಅವರನ್ನು ದೂಡಿ ಹಾಕಿ, ಆತನ ಕೈಯ್ಯಲ್ಲಿದ್ದ ಪಿಸ್ತೂಲಿನಿಂದ ಗುಂಡು ಹಾರಿಸಿದನು ಎನ್ನಲಾಗಿದೆ.
ಈ ವೇಳೆ ಪೊಲೀಸರು ಆತ್ಮರಕ್ಷಣೆಗಾಗಿ ಆರೋಪಿ ರಾಜು ಕಾಲಿಗೆ ಗುಂಡು ಹಾರಿಸಿದ್ದು, ಇದರಲ್ಲಿ ಅಲ್ಲೇ ಬಿದ್ದ ಆತನನ್ನು ಮತ್ತು ಆತನ ವಶದಲ್ಲಿದ್ದ ಪಿಸ್ತೂಲನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು ಎಂದು ತಿಳಿದುಬಂದಿದೆ. ರಾಜು ಪಿಸ್ತೂಲಿನಿಂದ ಗುಂಡು ಹಾರಿಸಿ ಡೇವಿಡ್ ಡಿಸೋಜರನ್ನು ಕೊಲೆ ಮಾಡಿದ ಆರೋಪಿಯಾಗಿದ್ದಾನೆ.
ಪೊಲೀಸರಿಗೆ ಗುಂಡು ಹಾರಿಸಿ ಗಾಯಗೊಳಿಸಿದ ಬಗ್ಗೆ ರಾಜು ವಿರುದ್ಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಪ್ರಕರಣ ದಾಖಲಾಗಿ ತನಿಖೆಯಲ್ಲಿದೆ.
ಇದೇ ವೇಳೆ ಮತ್ತಿಬ್ಬರು ಆರೋಪಿಗಳಾದ ಅಜಯ್ ರಸ್ತೋಗಿ ಅನ್ಮೋಲ್ ಹಾಗೂ ಜಿಯಾಹುಲ್ ವಜೂಲ್ ಶೇಖ್ ಅಲ್ಲಿಂದ ಪರಾರಿಯಾಗಿ ತಪ್ಪಿಸಿಕೊಂಡರೆನ್ನಲಾಗಿದೆ.
ತನಿಖೆ ಮುಂದುವರೆಸಿದ ಪೊಲೀಸರು ಪರಾರಿಯಾದ ಅಜಯ್ ರಸ್ತೋಗಿ ಅನ್ಮೋಲ್‌ನನ್ನು ಕುಮಟಾ ಪೊಲೀಸರ ಸಹಕಾರದಿಂದ ಕುಮಟಾದಲ್ಲಿ ಮತ್ತು ಜಿಯಾಹುಲ್ ವಜೂಲ್ ಶೇಖ್‌ನನ್ನು ಭಟ್ಕಳ ಪೊಲೀಸರ ಸಹಕಾರದಿಂದ ಭಟ್ಕಳದಲ್ಲಿ ಇಂದು ಬೆಳಗ್ಗೆ ಪೊಲೀಸರು ವಶಕ್ಕೆ ಪಡೆದಿದ್ದು ತನಿಖೆ ಮುಂದುವರಿಸಿದ್ದಾರೆ.
ಈ ಕಾರ್ಯಾಚರಣೆ ವೇಳೆ ಕಾಪು ಪೊಲೀಸ್ ಠಾಣಾ ಎಸ್ಸೈ ತೇಜಸ್ವಿ ಅವರಿಗೆ ಗಾಯವಾಗಿದ್ದು, ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಗೊಂಡ ಆರೋಪಿಯನ್ನು ಕೂಡಾ ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಮಾರ್ಗ ದರ್ಶನದಲ್ಲಿ ಉಡುಪಿ ಡಿವೈಎಸ್ಪಿ ಬೆಳ್ಳಿಯಪ್ಪ ನೇತೃತ್ವದಲ್ಲಿ, ಕಾಪು ವೃತ್ತ ನಿರೀಕ್ಷಕ ಅಝ್ಮತ್ ಅಲಿ ಜಿ., ಡಿ.ಎಸ್.ಬಿ. ವಿಭಾಗದ ಎಸ್ಸೈ ಹರೀಶ್, ಬೈಂದೂರು ವೃತ್ತ ನಿರೀಕ್ಷಕ ಶಿವಕುಮಾರ್, ಕುಂದಾಪುರ ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ, ಬೈಂದೂರು ಎಸ್ಸೈ ಮಹೇಶ್, ಕಾಪು ಎಸ್ಸೈ ತೇಜಸ್ವಿ, ಶಿರ್ವ ಎಸ್ಸೈ ಮಂಜುನಾಥ ಮರಬದ, ಕೊಲ್ಲೂರು ಎಸ್ಸೈ ವಿನಯ್, ಕಾರ್ಕಳ ಗ್ರಾಮಾಂತರ ಎಸ್ಸೈ ಪ್ರಸನ್ನ ಎಂ.ಎಸ್., ಪಡುಬಿದ್ರಿ ಎಸ್ಸೈಗಳಾದ ಶಕ್ತಿವೇಲು ಹಾಗೂ ಅನಿಲ್, ಶಿರ್ವ ಎಸ್ಸೈ ಲೋಹಿತ್ ಕುಮಾರ್, ಪ್ರೊಬೆಷನರಿ ಎಸ್ಸೈ ಶಿಫಾಝ್ ಹಾಗೂ ಸಿಬ್ಬಂದಿಯವರ ತಂಡ, ಭಟ್ಕಳ ಹಾಗೂ ಕುಮಟಾ ಪೊಲೀಸರು, ಜಿಲ್ಲಾ ಅಪರಾಧ ಪರಿಶೀಲನಾಧಿಕಾರಿ, ಬೆರಳಚ್ಚು, ಶ್ವಾನದಳ ಹಾಗೂ ಸಿ.ಡಿ.ಆರ್. ಸೆಲ್ ಉಡುಪಿ ಇವರು ಈ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.






