ಪಡುಬಿದ್ರೆ| ಇನ್ನಾ ಗ್ರಾಮದಲ್ಲಿ ಯುವಕನಿಗೆ ಚೂರಿ ಇರಿತ: ಆರೋಪಿ ಸೆರೆ

ಪಡುಬಿದ್ರಿ: ಫ್ಲಿಪ್‌ಕಾರ್ಟ್ ಡೆಲಿವರಿ ನೀಡುತಿದ್ದ ಯುವಕನೋರ್ವ ಉತ್ತರ ಪ್ರದೇಶದ ವ್ಯಕ್ತಿಗೆ ಚೂರಿ ಇರಿದು ಪರಾರಿಯಾಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಬಂಧಿತನನ್ನು ಮೋಹನ್ ಮಂಜರಪಲ್ಕೆ ನಂದಳಿಕೆ (26) ಎಂದು ಗುರುತಿಸಲಾಗಿದೆ.
ಇನ್ನಾ ಗ್ರಾಮದ ಕಾಂಜರಕಟ್ಟೆಯಲ್ಲಿರುವ ಬ್ರೈಟ್ ಫ್ಲೆಕ್ಸ್ ಕಂಪೆನಿಯಲ್ಲಿ 2018ರಿಂದ ಉದ್ಯೋಗಿಯಾಗಿರುವ ಉತ್ತರ ಪ್ರದೇಶ ಮೂಲದ ರಾಕೇಶ್ ಮಿಶ್ರಾ ಎಂಬಾತನಿಗೆ ಮಂಗಳವಾರ ರಾತ್ರಿ ಈತ ಚೂರಿ ಇರಿದು ಪರಾರಿಯಾಗಿದ್ದನು. ಈತನನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ.
ರಾಕೇಶ್ ತಮ್ಮ ಪತ್ನಿ ನಿಶಾ ಮಿಶ್ರಾ ಹಾಗೂ ಮೂವರು ಮಕ್ಕಳೊಂದಿಗೆ ಮುದ್ದಾಣು ಪ್ರದೇಶದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದಾರೆ. ಮಂಗಳವಾರ ರಾತ್ರಿ ಸುಮಾರು 8:30 ಗಂಟೆಗೆ ಕೆಲಸ ಮುಗಿಸಿ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದ ವೇಳೆ, ಈ ಹಿಂದೆ ಅವರ ಮನೆಗೆ ಪ್ರಿಪ್‌ಕಾರ್ಟ್ ಡೆಲಿವರಿ ನೀಡುತ್ತಿದ್ದ ಮೋಹನ್, ವಾಹನವನ್ನು ತಡೆದು ನಿಲ್ಲಿಸಿದ್ದಾನೆ. ತನ್ನ ಮೊಬೈಲ್‌ನಲ್ಲಿ ಆತನ ಪತ್ನಿಯ ಫೋಟೋ ತೋರಿಸಿ, ನಿನ್ನ ಹೆಂಡತಿಯನ್ನು ನಾನು ಪ್ರೀತಿಸುತ್ತೇನೆ. ನೀನು ಆಕೆಯನ್ನು ಬಿಟ್ಟುಬಿಡು, ಇಲ್ಲವಾದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ. ಈ ಬಗ್ಗೆ ಇಬ್ಬರ ಮಧ್ಯೆ ವಾಗ್ವಾದ ಉಂಟಾಗಿ, ಕಿಸೆಯಿಂದ ಚೂರಿ ತೆಗೆದು ರಾಕೇಶ್ ಮಿಶ್ರಾ ಅವರ ಇರಿದು ಕೊಲೆ ಮಾಡಲು ಯತ್ನಿಸಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ. ಗಾಯಗೊಂಡ ವ್ಯಕ್ತಿ ಮನೆಗೆ ತೆರಳಿ, ಬಳಿಕ ಪತ್ನಿ ಅವರನ್ನು ಉಡುಪಿಯ ಆದರ್ಶ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಮುಂದುವರಿ ದಿದೆ. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






