ಪರ್ಕಳ | ಮಕ್ಕಳ ನಕಾರಾತ್ಮಕತೆಯನ್ನು ಸಕಾರಾತ್ಮಕತೆಗೆ ಪರಿವರ್ತಿಸಿ : ಹೆತ್ತವರಿಗೆ ಡಾ.ಪಿ.ವಿ.ಭಂಡಾರಿ ಕಿವಿಮಾತು

ಪರ್ಕಳ, ನ.18: ಇಂದು ಮಕ್ಕಳ ಮನಸ್ಸು ನಿಯಂತ್ರಣವಿಲ್ಲದ ಕುದುರೆಯಂತೆ ಅಲೆದಾಡುತ್ತಿದೆ. ಮೊಬೈಲ್ ಎಂಬ ಮಂತ್ರಶಕ್ತಿ ಅವರನ್ನು ಯಾವ ದಿಕ್ಕಿಗೆ ಎತ್ತಿಕೊಂಡು ಹೋಗುತ್ತಿದೆಯೋ ತಿಳಿಯುವುದೇ ಕಷ್ಟ. ಅದರ ಪರಿಣಾಮ ಅವರಲ್ಲಿ ನಕಾರಾತ್ಮಕ ಮನೋಭಾವ ಬೇರುಬಿಟ್ಟಿದೆ. ಅದನ್ನು ಸಕಾರಾತ್ಮಕತೆಯತ್ತ ಪರಿವರ್ತಿಸುವ ಕೆಲಸವನ್ನು ಹೆತ್ತವರು, ಪೋಷಕರು ಮಾಡಬೇಕಾಗಿದೆ ಎಂದು ಖ್ಯಾತ ಮನೋರೋಗ ತಜ್ಞ ಹಾಗೂ ಡಾ.ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ ದೊಡ್ಡಣಗುಡ್ಡೆಯ ಡಾ.ಪಿ.ವಿ.ಭಂಡಾರಿ ಹೇಳಿದ್ದಾರೆ.
ಪರ್ಕಳದ ನೇತಾಜಿ ಸ್ಪೋರ್ಟ್ಸ್ ಕ್ಲಬ್ ತನ್ನ ಸುವರ್ಣ ವರ್ಷಾಚರಣೆಯ ಅಂಗವಾಗಿ, ಜನಮೆಚ್ಚಿದ ಶಿಕ್ಷಕರಾದ ದಿ.ಶಂಕರ ಕುಲಾಲ್ರ ಸ್ಮರಣಾರ್ಥ ಆಯೋಜಿಸಿದ್ದ -ಸುವರ್ಣ ಹರುಷ- ಚಿಣ್ಣರ ಚಿತ್ರ ರಚನಾ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಮೊಬೈಲ್, ಮಕ್ಕಳನ್ನು ಪ್ರಗತಿ ಪಥದಿಂದ ತಪ್ಪು ದಾರಿಯತ್ತ ಸರಿಸುವ ಅಪಾಯ ಹೆಚ್ಚಾಗಿದೆ. ಹದಿಹರೆಯ ಪ್ರವೇಶಿಸುವಷ್ಟರಲ್ಲಿ ಹಲವು ದುಶ್ಚಟಗಳು ಅವರ ಬದುಕಿನ ನೆರಳಾಗುತ್ತಿರುವುದು ಪೋಷಕರಿಗೆ ತಲೆನೋವಾಗಿ ಪರಿಣಮಿಸಿದೆ. ಈ ದಿಕ್ಕು ತಪ್ಪಿದ ಪರಿಸ್ಥಿತಿಯಿಂದ ಮಕ್ಕಳನ್ನು ಹೊರತರುವ ಶಕ್ತಿಯನ್ನು ಚಿತ್ರಕಲೆ, ಸಂಗೀತ, ಕ್ರೀಡೆ ಹಾಗೂ ಇತರೆ ಸೃಜನಾತ್ಮಕ ಹವ್ಯಾಸಗಳು ಹೊಂದಿವೆ. ಇವು ನಕಾರಾತ್ಮಕತೆಯನ್ನು ಸಕಾರಾತ್ಮಕ ಶಕ್ತಿಯಾಗಿ ರೂಪಾಂತರಿಸುವ ಸಾಮರ್ಥ್ಯವನ್ನು ನೀಡುತ್ತವೆ. ಆದ್ದರಿಂದ ಪೋಷಕರು ಈ ನಿಟ್ಟಿನಲ್ಲಿ ತಮ್ಮ ಗಮನ ಹರಿಸಬೇಕಾಗಿದೆ ಎಂದವರು ಹೆತ್ತವರಿಗೆ ಕಿವಿಮಾತು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಉಡುಪಿ ಆರ್ಟಿಸ್ಟ್ ಫೋರಂನ ಅಧ್ಯಕ್ಷ, ಹಿರಿಯ ಚಿತ್ರಕಲಾವಿದ ರಮೇಶ್ ರಾವ್ ಮಾತನಾಡಿ, ಚಿತ್ರಕಲೆ ನಮ್ಮನ್ನು ಕಲ್ಪನಾತೀತ ಲೋಕಕ್ಕೆ ಕರೆದೊಯ್ಯುವ ಅಲೌಕಿಕ ಶಕ್ತಿ ಹೊಂದಿದೆ. ಮನದಂಗಳದಲ್ಲಿ ಸಂತಸದ ಹೂಗಳನ್ನು ಅರಳಿಸಿ, ನೋವು-ದುಗುಡಗಳನ್ನು ದೂರ ಮಾಡುತ್ತದೆ. ಆದ್ದರಿಂದ ಎಲ್ಲರೂ ಚಿತ್ರಕಲೆಯನ್ನು ಹವ್ಯಾಸವನ್ನಾಗಿ ಸ್ವೀಕರಿಸಬೇಕು ಎಂದರು.
ರಾಮಮೂರ್ತಿ ಭಟ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ಮಣಿಪಾಲ, ಪರ್ಕಳ ಎಜ್ಯುಕೇಶನ್ ಸೊಸೈಟಿಯ ಕಾರ್ಯದರ್ಶಿ ದಿನೇಶ್ ಹೆಗ್ಡೆ ಆತ್ರಾಡಿ ಹಾಗೂ ಬೆಂಗಳೂರಿನ ಉದ್ಯಮಿ ತಾರಾ ಶಶಾಂಕ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ನೇತಾಜಿ ಕ್ಲಬ್ಬಿನ ಅಧ್ಯಕ್ಷ ಬಾಲಕೃಷ್ಣ ಪರ್ಕಳ ಸ್ವಾಗತಿಸಿದರೆ, ಮಹೇಶ್ ಪ್ರಭು ವಂದಿಸಿದರು. ಖಜಾಂಚಿ ರವೀಂದ್ರ ಆಚಾರ್ಯ ಕಾಯಕ್ರಮ ನಿರ್ವಹಿಸಿದರು.
ಸ್ಪರ್ಧೆಯಲ್ಲಿ 350 ಮಂದಿ ಸ್ಪರ್ಧಿಗಳು ಭಾಗವಹಿಸಿದ್ದು, ವಿವಿಧ ವಿಭಾಗಗಳ ವಿಜೇತರ ವಿವರ ಹೀಗಿದೆ :
ಕಿಂಡರ್ಗಾರ್ಡನ್ ವಿಭಾಗ : 1.ಭಕ್ತಿಶ್ರೀ ಬಾಯರಿ ವಿದ್ಯೋದಯ ಉಡುಪಿ, 2.ವೆಂಕಟೇಶ ವಂಶಿ ಕೃಷ್ಣ, ವಿದ್ಯೋದಯ ಉಡುಪಿ 3.ಅನಯ್ ಶೆಟ್ಟಿಗಾರ್, ಸೈಂಟ್ ಮೇರೀಸ್ ಉಡುಪಿ.
ಪ್ರಾಥಮಿಕ ಶಾಲಾ ವಿಭಾಗ : 1. ಆರ್ಯ ಪೈ, ಪೋದಾರ್ ಇಂಟರ್ನೇಷನಲ್ ಸ್ಕೂಲ್ ಉಡುಪಿ, 2. ಭವಾನಿ, ವಿದ್ಯೋದಯ ಉಡುಪಿ 3.ನಮ್ಯಶ್ರೀ, ಜಿ.ಎಂ.ವಿದ್ಯಾನಿಕೇತನ ಹಾರಾಡಿ ಬ್ರಹ್ಮಾವರ.
ಹಿರಿಯ ಪ್ರಾಥಮಿಕ ಶಾಲಾ ವಿಭಾಗ: 1.ಪ್ರಭಾತ್ ಉಡುಪ, ಅಮೃತ ಭಾರತಿ ಹೆಬ್ರಿ 2. ಪ್ರಣೀತ್, ಅಮೃತ ಭಾರತಿ ಹೆಬ್ರಿ, 3.ಹಿರಣ್ಮಯಿ ಭಟ್, ಮಾಧವ ಕೃಪ ಮಣಿಪಾಲ.
ಪ್ರೌಢ ಶಾಲಾ ವಿಭಾಗ: 1.ವಿನೀಶ್ ಆಚಾರ್ಯ, ಎಸ್ಆರ್ ಪಬ್ಲಿಕ್ ಸ್ಕೂಲ್ ಹೆಬ್ರಿ,2.ಕೃಷ್ಣ ಪ್ರಸಾದ್, ಅಮೃತ ಭಾರತಿ ಹೆಬ್ರಿ, 3. ಪ್ರಥ್ವಿರಾಜ್, ವಿದ್ಯೋದಯ ಉಡುಪಿ.







